ಅ. 4 ಚಿತ್ರಕೂಟ ಆಯುರ್ವೇದ ಕೇಂದ್ರದಲ್ಲಿ ಆಯುರ್ವೇದ ಹಬ್ಬ

KannadaprabhaNewsNetwork |  
Published : Oct 02, 2026, 02:45 AM IST
1ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ವಿಶೇಷ ಚೇತನರನ್ನು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಅಹವಾಲು ಆಲಿಸಿದರು. | Kannada Prabha

ಸಾರಾಂಶ

ಇಂದಿನ ಯುವಜನಾಂಗಕ್ಕೆ ಆಯುರ್ವೇದವನ್ನು ಪರಿಚಯಿಸುವ ಉದ್ದೇಶದಿಂದ ಇಲ್ಲಿನ ಆಲೂರಿನಲ್ಲಿರುವ ಚಿತ್ರಕೂಟ ಆಯುರ್ವೇದ ಕೇಂದ್ರದಲ್ಲಿ 4ರಂದು ಆಯುಷ್ ಇಲಾಖೆ ಸಹಯೋಗದೊಂದಿಗೆ ಚಿತ್ರಕೂಟ ಆಯುರ್ವೇದ ಹಬ್ಬ - 2026ನ್ನು ಆಯೋಜಿಸಲಾಗಿದೆ ಎಂದು ಚಿತ್ರಕೂಟದ ಮುಖ್ಯಸ್ಥರಾದ ಡಾ.ರಾಜೇಶ ಬಾಯರಿ ತಿಳಿಸಿದ್ದಾರೆ.

ಕುಂದಾಪುರ: ಇಂದಿನ ಯುವಜನಾಂಗಕ್ಕೆ ಆಯುರ್ವೇದವನ್ನು ಪರಿಚಯಿಸುವ ಉದ್ದೇಶದಿಂದ ಇಲ್ಲಿನ ಆಲೂರಿನಲ್ಲಿರುವ ಚಿತ್ರಕೂಟ ಆಯುರ್ವೇದ ಕೇಂದ್ರದಲ್ಲಿ 4ರಂದು ಆಯುಷ್ ಇಲಾಖೆ ಸಹಯೋಗದೊಂದಿಗೆ ಚಿತ್ರಕೂಟ ಆಯುರ್ವೇದ ಹಬ್ಬ - 2026ನ್ನು ಆಯೋಜಿಸಲಾಗಿದೆ ಎಂದು ಚಿತ್ರಕೂಟದ ಮುಖ್ಯಸ್ಥರಾದ ಡಾ.ರಾಜೇಶ ಬಾಯರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು ಆಯುರ್ವೇದ ನಾಳೆಗೆ ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ ಎಂಬ ಧ್ಯೇಯವಾಕ್ಯದೊಂದಿಗೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಈ ಹಬ್ಬ ನಡೆಯಲಿದೆ ಎಂದರು.

ಆಯುರ್ವೇದ ಎಂಬುದು ಕೇವಲ ಕಷಾಯಕ್ಕೆ ಸೀಮಿತವಾಗಿರದೆ, ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ನಿತ್ಯಜೀವನದ ಆರೋಗ್ಯಕರ ಶೈಲಿ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಲು ಸಾರ್ವಜನಿಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ಉಚಿತವಾಗಿದೆ ಎಂದರು. ಈ ಆಯುರ್ವೇದ ಹಬ್ಬದಲ್ಲಿ ನಿಮ್ಮ ಪ್ರಕೃತಿ, ನಿಮ್ಮ ಆಹಾರ (ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ), ಗೋಮಾತೆ ಅಪ್ಪುಗೆ (ದೇಸಿ ಗೋಶಾಲಾ ಭೇಟಿ - ಹಸುವನ್ನು ಅಪ್ಪಿಕೊಳ್ಳುವ ಅಪೂರ್ವ ಅನುಭವ), ಕಷಾಯ ಶಾಲೆ (ರೋಗನಿರೋಧಕ ಕಷಾಯ ತಯಾರಿಸುವ ಪ್ರಾತ್ಯಕ್ಷಿಕೆ), ಹರ್ಬಲ್ ವಾಕ್ (18 ಎಕರೆಯಲ್ಲಿರುವ ಅಪರೂಪದ ಗಿಡಮೂಲಿಕೆಗಳ ಪರಿಚಯ), ಆಯುರ್ವೇದ ಜಗತ್ತು (ಪಂಚಕರ್ಮ ಚಿಕಿತ್ಸಾ ವಿಧಾನಗಳ ಪರಿಚಯ) ಕಾರ್ಯಕ್ರಮಗಳ‍ು ನಡೆಯಲಿದೆ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಬ್ಬವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅನುಪಮಾ, ಕುಂದಾಪುರದ ಚಿನ್ಮಯ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಉಮೇಶ್ ಪುತ್ರನ್, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ ಹಾಗೂ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಮುಖ್ಯಸ್ಥರು ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ ರಮೇಶ್ ವೈದ್ಯ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಸ್ವರ್ಣ ಕಮಲ ಪುರಸ್ಕೃತ ಖ್ಯಾತ ಚಿತ್ರ ವಿಮರ್ಶಕ ಡಾ. ಪ್ರದೀಪ್ ಕೆಂಚನೂರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸಮಾರೋಪ ಕಾರ್ಯಕ್ರಮದಲ್ಲಿ ಬೈಂದೂರು ಮಾಜಿ ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಕೆ. ಗೋಪಾಲ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾರಣಕಟ್ಟೆಯ ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜ, ಹಿರಿಯ ಪತ್ರಕರ್ತರಾದ ಯು.ಎಸ್. ಶೆಣೈ ಹಾಗೂ ಉಡುಪಿ ಜಿಲ್ಲಾ ಎಎಫ್ಐ ಅಧ್ಯಕ್ಷ ಡಾ.ಎಸ್. ಆಂಚನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ ಕೊಡ್ಗಿ ಭಾಗವಹಿಸಲಿದ್ದಾರೆ.

ಆಯುರ್ವೇದ ಹಬ್ಬದಲ್ಲಿ ಪ್ರಕೃತಿ, ಆರೋಗ್ಯ ಮತ್ತು ಗ್ರಾಮೀಣ ಪರಂಪರೆಗೆ ಪೂರಕವಾದ ವಿವಿಧ ಸಾವಯವ ಮಳಿಗೆಗಳನ್ನು ಆಯೋಜಿಸಲಾಗಿದೆ. ಆರೋಗ್ಯಕರ ತಾಜಾ ಪಾನೀಯ, ನೈಸರ್ಗಿಕ ಐಸ್‌ಕ್ರೀಮ್ ಹಾಗೂ ಪರಿಸರಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ವಸ್ತುಗಳ ಮಾರಾಟ ಮಳಿಗೆಗಳು ಸಾರ್ವಜನಿಕರಿಗೆ ನೈಸರ್ಗಿಕ ಜೀವನ ಶೈಲಿಯನ್ನು ಹತ್ತಿರದಿಂದ ಪರಿಚಯಿಸಲಿವೆ ಎಂದು ಹೇಳಿದರು.

ಅಪರೂಪದ ಆಯುರ್ವೇದ ಥಾಲಿ: ಮಧ್ಯಾಹ್ನದ ಊಟಕ್ಕೆ ಆರೋಗ್ಯ ಮತ್ತು ರುಚಿಯ ಸಂಗಮವಾದ ಅಪರೂಪದ ಆಯುರ್ವೇದ ಥಾಲಿಯನ್ನು ಅತ್ಯಂತ ರಿಯಾಯಿತಿ/ಸಣ್ಣ ಮೊತ್ತಕ್ಕೆ ನೀಡಲಾಗುತ್ತದೆ. ಈ ಥಾಲಿಯಲ್ಲಿ ಗೆಣಸಿನ ಸೂಪ್, ಹುರುಳಿ ಕೊಟ್ಟೆ ಕಡುಬು, ನೆಲಗಡಲೆ ಕೋಸುಂಬರಿ, ಹೆಸರುಕಾಳು ತೊವೆ, ಕೆಂಪು ಅಕ್ಕಿ ಅನ್ನ, ಹುರುಳಿ ಸಾರು, ಪತ್ರೊಡೆ, ನುಗ್ಗೆ ಸೊಪ್ಪಿನ ಚಟ್ನಿ, ಚಕ್ತೆ ಸೊಪ್ಪಿನ ಕೆಂಪು ಚಟ್ನಿ, ಒಂದೆಲಗ ತಂಬಳಿ, ಬೋಂಡ ಪಾಯಸ, ಬಾಳೆದಿಂಡಿನ ಬೆಲ್ಲದ ಪಾಕ, ಗೊಂಬಳಕಾಯಿ ಜ್ಯೂಸ್, ಮಜ್ಜಿಗೆ ಸೊಪ್ಪಿನ ಮಜ್ಜಿಗೆ ಹಾಗೂ ಸಾಂಪ್ರದಾಯಿಕ ಹಾಲುಬಾಯಿ ಇರಲಿವೆ ಎಂದರು.

ವಿದ್ಯಾರ್ಥಿಗಳಿಗೆ ವೈವಿಧ್ಯ ಸ್ಪರ್ಧೆಗಳು: ಶಾಲಾ ವಿದ್ಯಾರ್ಥಿಗಳಿಗಾಗಿ ಅಂದೇ ಸ್ಥಳದಲ್ಲಿ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ರು. ಬಹುಮಾನ ನೀಡಲಾಗುವುದು. ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಮುಕ್ತ ಸಂವಾದ ನಡೆಯಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಘು ಭೂಕಂಪನದಿಂದ ಆತಂಕ ಬೇಡ: ಭೂ ವಿಜ್ಞಾನಿ ಕೆ.ಚಂದ್ರಶೇಖರ
ಸೋಮವಾರಪೇಟೆ: ಸಾರ್ವಜನಿಕರ ಕುಂದುಕೊರತೆ ಜನಸಂಪರ್ಕ ಸಭೆ