ಚಿಕ್ಕಪೈಲಗುರ್ಕಿ, ಕುರುಬರಹಳ್ಳಿಯಲ್ಲಿ ಕಾಲರಾ ಶಂಕೆ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ಎರಡೂ ಗ್ರಾಮಗಳ ಜನರ ಆರೋಗ್ಯ ಹದಗೆಡುತ್ತಿದ್ದು 40ಕ್ಕೂ ಹೆಚ್ಚು ಮಂದಿಯಲ್ಲಿ ಮೈಕೈನೋವು, ವಾಂತಿ ಭೇದಿ, ಜ್ವರ ಪ್ರಾರಂಭವಾಗಿದೆ. ಅಲ್ಲದೆ ಹೆಚ್.ಕುರುಬರಹಳ್ಳಿ ಗ್ರಾಮದ 67 ವರ್ಷದ ವೃದ್ಧ ಸಿದ್ದಪ್ಪ ಎಂಬುವರು ಶನಿವಾರ ಮೃತಪಟ್ಟಿರುವುದು ಎರಡೂ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಸಮಸ್ಯೆಗೆ ಗ್ರಾಮ ಪಂಚಾಯಿತಿ ಸರಬರಾಜು ಮಾಡುತ್ತಿರುವ ನೀರು ಕಾರಣ ಎನ್ನಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಚಿಕ್ಕಪೈಯಲಗುರ್ಕಿ ಹಾಗೂ ಎಚ್.ಕುರುಬರಹಳ್ಳಿ ಅವಳಿ ಗ್ರಾಮಗಳ ಜನ ವಾಂತಿ ಭೇದಿ, ಮೈ-ಕೈ ನೋವಿನಿಂದ ಬಳಲುತ್ತಿದ್ದಾರೆ. ಈ ನಡುವೆ ವಾಂತಿ-ಭೇದಿಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆಲ್ಲಾ ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ನೀರು ಕಲುಷಿತವಾಗಿರುವ ಅನುಮಾನ ವ್ಯಕ್ತವಾಗಿದೆ. ಇದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ತಾಲೂಕಿನ ದೊಡ್ಡ ಪೈಲಗುರ್ಕಿ ಗ್ರಾಮ ಪಂಚಾಯಿತಿ ಯಿಂದ ಚಿಕ್ಕಪೈಲಗುರ್ಕಿ ಹಾಗೂ ಎಚ್. ಕುರುಬಹಳ್ಳಿ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ನೀರಿನ ಪೈಪ್ ಬದಲಾವಣೆ ಬಳಿಕ ನೀರು ಕಲುಷಿತಗೊಂಡಿದೆ ಎನ್ನಲಾಗಿದೆ.

ವೃದ್ಧನ ಸಾವು: ಆತಂಕ

ಎರಡೂ ಗ್ರಾಮಗಳ ಜನರ ಆರೋಗ್ಯ ಹದಗೆಡುತ್ತಿದ್ದು 40ಕ್ಕೂ ಹೆಚ್ಚು ಮಂದಿಯಲ್ಲಿ ಮೈಕೈನೋವು, ವಾಂತಿ ಭೇದಿ, ಜ್ವರ ಪ್ರಾರಂಭವಾಗಿದೆ. ಅಲ್ಲದೆ ಹೆಚ್.ಕುರುಬರಹಳ್ಳಿ ಗ್ರಾಮದ 67 ವರ್ಷದ ವೃದ್ಧ ಸಿದ್ದಪ್ಪ ಎಂಬುವರು ಶನಿವಾರ ಮೃತಪಟ್ಟಿರುವುದು ಎರಡೂ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಎರಡೂ ಗ್ರಾಮಗಳ ಜನತೆಯಲ್ಲಿ ಕಾಣಿಸಿಕೊಂಡಿರುವ ಅನಾರೋಗ್ಯ ಸಮಸ್ಯೆಗೆ ಗ್ರಾಮ ಪಂಚಾಯಿತಿ ಸರಬರಾಜು ಮಾಡುತ್ತಿರುವ ನೀರೇ ಮೂಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೀರಿನ ಮಾದರಿ ಪ್ರಯೋಗಾಲಯಕ್ಕೆ

ಈ ವೇಳೆ ವಾಂತಿ ಭೇದಿ ಮೈಕೈ ನೋವಿನಿಂದ ನರಳುತ್ತಿರುವವರ ಮಲ ಮೂತ್ರ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿದೆ. ಇದರೊಂದಿಗೆ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ನೀರನ್ನೂ ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿ ಬಂದ ಬಳಿಕ ನಿಜವಾದ ಕಾರಣ ಗೊತ್ತಾಗಲಿದೆ.

ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಎಚ್.ಕುರುಬರಹಳ್ಳಿ ಗ್ರಾಮದಲ್ಲಿ ಮೃತಪಟ್ಟಿರುವ ವೃದ್ಧನ ಸಾವಿಗೆ ಸಾಂಕ್ರಾಮಿಕ ರೋಗ ಕಾರಣವಲ್ಲ. ಬದಲಿಗೆ ಆತ ಮಧ್ಯಪಾನ ಮಾಡುತ್ತಿದ್ದ, ಅದರಿಂದಲೇ ಸಾವಾಗಿರಬಹುದು ಎಂಬ ಮಾಹಿತಿಯಿದೆ ಎಂದಿದ್ದಾರೆ.

ಸಾವಿಗೆ ಮದ್ಯಪಾನ ಕಾರಣಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳರನ್ನು ವಿಚಾರಿಸಲಾಗಿ ಒಂದು ವಾರದಿಂದ ಎರಡೂ ಗ್ರಾಮಗಳ ಕೆಲವರಲ್ಲಿ ವಾಂತಿ ಬೇದಿ ಕಾಣಿಸಿಕೊಂಡಿದೆ.ಇವರೆಲ್ಲಾ ಅವರಿಗೆ ಅನುಕೂಲ ಇರುವ ಆಸ್ಪತ್ರೆಗಳಿಗೆ ತೆರಳಿ ತೋರಿಸಿಕೊಂಡಿದ್ದಾರೆ. ಪೈಕಿ ಯಾರೂ ಕೂಡ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾಗಿಲ್ಲ. ಸುಮಾರು 20 ಮಂದಿಯಲ್ಲಿ ವಾಂತಿ, ಬೇದಿ ಕಾಣಿಸಿಕೊಂಡಿದೆ. ಆದರೆ ಎಚ್.ಕುರುಬರಹಳ್ಳಿ ಗ್ರಾಮದ ಸಿದ್ಧಪ್ಪ ಎಂಬ ವ್ಯಕ್ತಿ ಶನಿವಾರ ಮೃತಪಟ್ಟಿರುವ ಬಗ್ಗೆ ಮಾಹಿತಿಯಿದೆ. ಇವರು ಮದ್ಯಪಾನ ಸೇವಿಸುತ್ತಿದ್ದರೆಂಬ ಬಗ್ಗೆ ಅವರ ಕುಟುಂದವರೇ ಹೇಳುತ್ತಾರೆ. ಇದರ ಅಡ್ಡಪರಿಣಾಮದಿಂದ ಮೃತಪಟ್ಟಿರಬಹುದು. ವೈದ್ಯಕೀಯ ವರದಿ ಬಂದ ನಂತರ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ ಎನ್ನುತ್ತಾರೆ.

Share this article