ಗದಗ: ರಾಜ್ಯ ಸರ್ಕಾರ ಗ್ಯಾರಂಟಿ ಗ್ಯಾರಂಟಿ ಎಂದು ಕೈಯಲ್ಲಿ ಚೊಂಬು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರಲ್ಲ, ಜೂನ್ 4 ಕ್ಕೆ ಇವರ ಕೈಗೆ ಚೊಂಬು ಗ್ಯಾರಂಟಿ ಬರುತ್ತದೆ, ಅದಕ್ಕಾಗಿ ಸಿದ್ಧವಾಗಿರಿ ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅವರು ಗುರುವಾರ ಸಂಜೆ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.ನರೇಂದ್ರ ಮೋದಿ ಅವರೊಬ್ಬ ವ್ಯಕ್ತಿ ಅಲ್ಲ, ಶಕ್ತಿ. ವಿಶ್ವ ನಾಯಕ ಆಗಿರುವ ಅವರು ಕಳೆದ 10 ವರ್ಷದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಆಡಳಿತ ನಡೆಸಿದ್ದಾರೆ. ಅವರ ಸ್ವಚ್ಚ ಮತ್ತು ದೇಶ ಪ್ರೇಮದ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ. ಅವರ ವಿರುದ್ಧ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಜನರಿಗೆ ಆಸೆ ಆಮಿಷ ತೋರಿಸುತ್ತಿದ್ದಾರೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನವನ್ನೂ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಅದೇ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಧರ್ಮಾಧರಿತ ಮೀಸಲಾತಿ ನೀಡಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದರು.ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆ ಹಾಸ್ಯಾಸ್ಪದ ಎನಿಸಿದೆ. ಪ್ರತಿ ಮಹಿಳೆಗೆ 1 ಲಕ್ಷ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದು ಹಾಸ್ಯಾಸ್ಪದ. ಕಾಂಗ್ರೆಸ್ ಪ್ರಕಾರ ₹70 ಲಕ್ಷ ಕೋಟಿ ಅಗತ್ಯವಿದೆ. ಇಷ್ಟು ಬಜೆಟ್ ಸಂಗ್ರಹಿಸುವುದೇ ಸಾಧ್ಯವಿದೆಯೇ? ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದೇ 230 ಕ್ಷೇತ್ರ. ಬಹುಮತ ಬರಲು ಕಾಂಗ್ರೆಸ್ಸಿಗೆ ಸಾಧ್ಯವೇ ಇಲ್ಲ ಎಂದರು.
ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿದರು. ರಾಜು ಕುರಡಗಿ, ಎಸ್.ವಿ. ಸಂಕನೂರು, ಉಷಾ ದಾಸರ, ಮೋಹನ ಮಾಳಶೆಟ್ಟಿ, ವಿಜಯಕುಮಾರ್ ಗಡ್ಡಿ, ಸಿದ್ದು ಪಲ್ಲೇದ, ಜೆಡಿಎಸ್ ವಕ್ತಾರ ವೆಂಕನಗೌಡ ಗೋವಿಂದಗೌಡ್ರ, ಎಂ.ಎಸ್. ಕರಿಗೌಡ್ರ ಮುಂತಾದವರು ಹಾಜರಿದ್ದರು. ಲಿಂಗರಾಜಗೌಡ ಪಾಟೀಲ ನಿರೂಪಿಸಿದರು. ಅನಿಲ ಅಬ್ಬಿಗೇರಿ ವಂದಿಸಿದರು.