ಕೊಪ್ಪಳ: ಇಲ್ಲಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮ ಸೋಮವಾರ ಜರುಗಿತು. ಪ್ರತಿ ವರ್ಷ ರಾಯಚೂರಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಿಂದ ಮೇ 25ರಂದು ಮುಂಗಾರು ಬೀಜ ದಿನೋತ್ಸವ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಉದ್ಘಾಟಿಸಿ ಮಾತನಾಡಿ, ಈ ಭಾಗದ ರೈತರಿಗೆ ಉತ್ತಮ ಬೀಜಗಳನ್ನು ಒದಗಿಸುವ ಸಲುವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಮತ್ತು ವಿಸ್ತರಣಾ ಮುಂದಾಳುಗಳೊಂದಿಗೆ ಚರ್ಚಿಸಿ ಉತ್ತಮ ಗುಣಮಟ್ಟದ ವಿವಿಧ ಬೆಳೆಗಳ ಪ್ರಮಾಣಿತ ಸಂಕರಣ ತಳಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್. ಮಾತನಾಡಿ, ಈ ಭಾಗದ ರೈತರಿಗೆ ಉತ್ತಮ ತಳಿ ಮತ್ತು ಸಂಕರಣ ತಳಿಗಳನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಳಿಗಳನ್ನು ಆಯ್ಕೆ ಮಾಡಿ ವೈಜ್ಞಾನಿಕವಾಗಿ ಬಿತ್ತನೆ ಮಾಡಿ ನಿರ್ವಹಣೆ ಮಾಡಿದಲ್ಲಿ ಉತ್ತಮ ಫಸಲು ಪಡೆಯಬಹುದು ಎಂದು ಹೇಳಿದರು.ಗುಳದಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಹಾಗೂ ಬೀಜ ವಿಜ್ಞಾನಿಯಾದ ಡಾ. ಹನುಮಂತಪ್ಪ ದಾಸರಹಳ್ಳಿ ಮಾತನಾಡಿ, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ವಿವಿಧ ಬೆಳೆಗಳ ತಳಿ ಮತ್ತು ಸಂಕರಣ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ಕುಕನೂರು ತಾಲೂಕಿನ ಕೃಷಿಕ ಸಮಾಜದ ನಿರ್ದೇಶಕ ಪ್ರಕಾಶ್ ಮೇಟಿ, ಪ್ರಗತಿಪರ ರೈತರಾದ ಮುದುಕಪ್ಪ ದೇವರ, ಜೀವಂತ ಗೌಡ, ಗವಿಸಿದ್ದಪ್ಪ, ಶರಣೆಗೌಡ ಹಾಗೂ ಹನುಮಂತಪ್ಪ ಉಪಸ್ಥಿತರಿದ್ದರು.