ಕ್ರಿಶ್ಚಿಯನ್‌ ಸಮುದಾಯದ ಸೇವೆ ಶ್ಲಾಘನೀಯ: ಸಿಎಂ

KannadaprabhaNewsNetwork |  
Published : Dec 19, 2023, 01:45 AM IST
Baptist Hospital 1 | Kannada Prabha

ಸಾರಾಂಶ

ಕ್ರಿಶ್ಚಿಯನ್‌ ಸಮುದಾಯದ ಸೇವೆ ಶ್ಲಾಘನೀಯ: ಸಿಎಂಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ಅಪಾರ. ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ರೇಡಿಯೇಷನ್‌ ಥೆರಪಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತೀಯ ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅಂತಹ ಸಾಮಾಜಿಕ ಅಸಮಾನತೆಯ ಕಾಲದಲ್ಲಿ ಕ್ರಿಶ್ಚಿಯನ್‌ ಸಮುದಾಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಶ್ಲಾಘನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ನಗರದ ಬ್ಯಾಪ್ಟಿಸ್ಟ್‌ ಆಸ್ಪತ್ರೆಯಲ್ಲಿ ಲೀನಿಯರ್‌ ಆ್ಯಕ್ಸರಲೇಟರ್‌ ರೇಡಿಯೇಷನ್‌ ಥೆರಪಿ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಸಮುದಾಯ ಅತ್ಯುತ್ತಮ ಕೆಲಸ ಮಾಡಿದೆ. ಉಡುಪಿ ಹಾಗೂ ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಈ ಸಮುದಾಯ ಒಳ್ಳೆಯ ಬುನಾದಿಯನ್ನು ಹಾಕಿದೆ. ಭಾರತೀಯ ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಅಂತಹ ಸಮಯದಲ್ಲಿ ಇವರ ಸೇವೆ ಶ್ಲಾಘನೀಯ ಎಂದರು.

ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯ:

ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಆಧುನಿಕ ಚಿಕಿತ್ಸಾ ವಿಧಾನವಾದ ಲೀನಿಯರ್ ಆಕ್ಸರಲೇಟರ್ ರೆಡಿಯಷನ್ ಥೆರಪಿ ಸೇವೆಯನ್ನು ಉದ್ಘಾಟಿಸಿದ್ದೇನೆ. ಪ್ರಥಮ ಹಂತದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಿದರೆ, ರೋಗವನ್ನು ಗುಣಪಡಿಸಬಹುದು. ಯುವರಾಜ್‌ ಸಿಂಗ್ ಸೇರಿದಂತೆ ಹಲವರು ಈ ಕಾಯಿಲೆಯನ್ನು ಗೆದ್ದಿದ್ದಾರೆ. ಕಡೆಯ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಾಗ, ಕಾಯಿಲೆ ಉಲ್ಬಣಗೊಳ್ಳದಿರಲು ಈ ಅತ್ಯಾಧುನಿಕ ಚಿಕಿತ್ಸೆ ಸಹಕಾರಿಯಾಗಿದೆ.

ಇನ್ನು ಈ ಆಸ್ಪತ್ರೆಗೆ ಹಳ್ಳಿಗಾಡಿನ ಜನರು ಹೆಚ್ಚು ಬರುವುದರಿಂದ ಇಲ್ಲಿನ ವೈದ್ಯರು ಕನ್ನಡದಲ್ಲಿ ಮಾತನಾಡುವುದರಿಂದ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ:

ಶ್ರೀಮಂತರು ಉತ್ತಮ ಹಾಗೂ ದುಬಾರಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ದಿನನಿತ್ಯ ಜೀವನದಕ್ಕಾಗಿ ಹೋರಾಡುವ ಬಡ ಜನರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಜನಸೇವೆಯಲ್ಲಿ ನಂಬಿಕೆ ಇರಿಸಿದೆ ಎಂದರು.

ಸಚಿವ ಬೈರತಿ ಸುರೇಶ್‌ ಮಾತನಾಡಿ, ಆಸ್ಪತ್ರೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಯಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಡರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದು, ಸರ್ಕಾರ ಈ ಆಸ್ಪತ್ರೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಈ ಆಸ್ಪತ್ರೆ ನಮ್ಮ ಕ್ಷೇತ್ರದಲ್ಲಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.

ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಆಸ್ಪತ್ರೆಯ ಪದಾಧಿಕಾರಿಗಳು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ