ಕನ್ನಡಪ್ರಭ ವಾರ್ತೆ ಬೀದರ್
ಮಂಗಳೂರಿನ ಕಡು ಬಡುತನದ ಮನೆಯಲ್ಲಿ ಹುಟ್ಟಿ, ಐದು ವರ್ಷಕ್ಕೆ ಪೋಲಿಯೋ ಪೀಡಿತರಾಗಿ ಕಾಲು ಕಳೆದುಕೊಂಡು ಅಂಗವಿಕಲರಾದರೂ ಎದೆಗುಂದದೆ ಸಾವಿರಾರು ಬಡ ಹೆಣ್ಣು ಮಕ್ಕಳಿಗೆ ಬದುಕಿನ ಸಂಕಷ್ಟದ ಬವಣೆ ನೀಗಿಸಿದವರು ತಾಯಿ ಕ್ರಿಸ್ಟಿನ್ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ ಚನ್ನಶೆಟ್ಟಿ ನುಡಿದರು.ಕಸಾಪ ತಾಲೂಕು ಹಾಗೂ ಜಿಲ್ಲಾ ಘಟಕ ಆಯೋಜಿಸಿದ್ದ ಮೈಲೂರಿನ ತಾಯಿ ಕ್ರಿಸ್ಟಿನ್ ಅವರ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾದ ಶ್ರೀಕಾಂತ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಯಿ ಕ್ರಿಸ್ಟಿನ್ ಅವರು ಸಂಕಷ್ಟದ ಸುಳಿಯಲ್ಲಿ ಸಿಕ್ಕಂತ ಅನೇಕ ಹೆಣ್ಣು ಮಕ್ಕಳ ಬಾಳು ಬೆಳಗಿದವರು ಎಂದರು.ಸಂವಿಧಾನದ ಬಗ್ಗೆ ಜಾಗೃತಿ ಮಾಡುವಾಗ ತಾವೊಬ್ಬರೆ ನಮ್ಮ ಜೊತೆಗಿದ್ದು ನೂರಾರು ಗ್ರಾಮಗಳಿಗೆ ಸುತ್ತಾಡಿ ಸೇವೆಯೆಂಬುವುದು ಸಾರ್ಥಕ ಜೀವನದ ಸಂತೃಪ್ತಿ ಎಂಬುವುದನ್ನು ತೋರಿಸಿಕೊಟ್ಟ ಮಹಾ ಮಾತೆ. 76 ವರ್ಷದ ಸಿಸ್ಟರ್ ಕ್ರಿಸ್ಟಿನ್, ಮಿಸ್ಕಿಚ್ ಎ.ಸಿ. ಕಾರ್ಮೆಲ್ ನಿಕೇತನ ಸಂಸ್ಥೆ ಕಟ್ಟಿಕೊಂಡು ಜಿಲ್ಲೆಯ ವಿಧವೆಯವರಿಗೆ, ಅಂಗವಿಕಲರಿಗೆ, ನಿರ್ಗತಿಕರ ಬಾಳಿಗೆ ಬೆಳಕಾಗಿ ಉಪಜೀವನಕ್ಕೆ ನಾಂದಿಯಾದವರು ಎಂದರು.
ಅನೇಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾದಾಗ ನ್ಯಾಯ ದೊರಕಿಸಿ ಕೊಟ್ಟವರು ಸತಿ ಪತಿ ಜಗಳವಾಗಿ ಸಂಸಾರದಲ್ಲಿ ಕಗ್ಗಂಟಾದಾಗ ಕೈಹಿಡಿದು ಮುನ್ನಡಿಸಿದ ಮಾರ್ಗದರ್ಶಕರಿವರು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಪ್ರಾಚಾರ್ಯರಾದ ದೇವೆಂದ್ರ ಹಳ್ಳಿಖೇಡಕರ ಕ್ರಿಸ್ಟಿನ್ ಅವರ ಸೇವಾ ಮನೋಭಾವನೆ ನೋಡಿದರೆ ಅವರು ಜಿಲ್ಲೆಯ ಮದರ್ ತೆರೆಸಾ ಎನ್ನಬಹುದಾಗಿದೆ. ಅಂಗವಿಕಲವೆಂಬುವುದು ಕೀಳರಿಮೆಯಲ್ಲ. ಅಂತಹ ಸಂಕಷ್ಟದ ಮಧ್ಯೆಯು ಅನೇಕ ಜನಹಿತ ಕಾರ್ಯಕ್ರಮಗಳನ್ನು ಮಾಡಿ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿದವರು ಸಾಮಾಜಕ್ಕೊಂದು ಮಾದರಿ ಎಂದರು.
ಶಿಕ್ಷಕ, ರಾಜೇಶ್ವರ ಹೂಗಾರ ಹಾಗೂ ಗೊಂಡಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಬಕೆ ಮಾತೆ ಕ್ರಿಸ್ಟಿನ್ ಜೊತೆ ಸಂವಾದ ನಡೆಸಿದಾಗ ತಮ್ಮ ಅನುಭವಗಳನ್ನು ಹಂಚಿಕೊಂಡು ನಾನೇನು ದೊಡ್ಡ ಕೆಲಸ ಮಾಡಿಲ್ಲ. ದೇವರ ಆಶೀರ್ವಾದ ಅವರ ಹಿತ ನುಡಿಗಳ ಪ್ರೇರಣೆಯಿಂದ ಕೆಲಸ ಮಾಡಿದ್ದೇನೆಂದು ತಮ್ಮ ಅನುಭವ ಹಂಚಿಕೊಂಡು ನನ್ನ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನವರು ಬಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಂದು ಅಪರೂಪದ ಕ್ಷಣವೆಂದು ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮೇರಿ ಹಾಗೂ ಕನ್ಯಾಕುಮಾರಿ ತಮ್ಮ ಅನುಭವ ಹಂಚಿಕೊಂಡರು. ತಾಲೂಕು ಕಸಾಪ ಅಧ್ಯಕ್ಷ ಎಂಎಸ್ ಮನೋಹರ ಮಾತನಾಡಿದರು. ಈ ಸಂದರ್ಭದಲ್ಲಿ ಶಂಭುಲಿಂಗ ವಾಲದೊಡ್ಡಿ, ಟಿಎಂ ಮಚ್ಚೆ ಹಾಗೂ ಶಿವಶಂಕರ ಟೋಕರೆ ಇದ್ದರು.