ಕಾರ್ಮೆಲ್ ಶಾಲೆಯಲ್ಲಿ ಕ್ರಿಸ್‌ಮಸ್ ಸಂಭ್ರಮ

KannadaprabhaNewsNetwork |  
Published : Dec 24, 2025, 01:45 AM IST
೨೩ಕೆಎಂಎನ್‌ಡಿ-೧ಮತ್ತು ೨ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಯೇಸು ಕ್ರಿಸ್ತನ ಜನನದ ಕುರಿತಾದ ನೃತ್ಯರೂಪಕವನ್ನು ಅದ್ಭುತವಾಗಿ ಪ್ರದರ್ಶಿಸಿದರು. | Kannada Prabha

ಸಾರಾಂಶ

ಯೇಸು ಹುಟ್ಟುವ ಮುನ್ನ ಇದ್ದಂತಹ ವಾತಾವರಣ, ಯೇಸು ಹುಟ್ಟಿದ ನಂತರ ಸೃಷ್ಟಿಯಾದ ವಾತಾವರಣವನ್ನು ನೃತ್ಯ ರೂಪಕದ ಮೂಲಕ ಮಕ್ಕಳು ಪ್ರಸ್ತುತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕಾರ್ಮೆಲ್ ಕಾನ್ವೆಂಟ್ ಆವರಣದಲ್ಲಿ ಮಂಗಳವಾರ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿತ್ತು. ಯೇಸುವಿನ ಜನನ ಕುರಿತಾದ ನೃತ್ಯರೂಪಕ ಅದ್ಭುತವಾಗಿ ಮೂಡಿಬಂದಿತು. ವಿಭಿನ್ನ ಉಡುಗೆ-ತೊಡುಗೆಗಳೊಂದಿಗೆ ಮಕ್ಕಳು ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನಗೆದ್ದರು.ಯೇಸು ಹುಟ್ಟುವ ಮುನ್ನ ಇದ್ದಂತಹ ವಾತಾವರಣ, ಯೇಸು ಹುಟ್ಟಿದ ನಂತರ ಸೃಷ್ಟಿಯಾದ ವಾತಾವರಣವನ್ನು ನೃತ್ಯ ರೂಪಕದ ಮೂಲಕ ಮಕ್ಕಳು ಪ್ರಸ್ತುತಪಡಿಸಿದರು. ಸುಮಾರು 30 ನಿಮಿಷದ ನೃತ್ಯ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು. ಚಿಟ್ಟೆ ರೂಪದ ಉಡುಗೆ ತೊಟ್ಟಿದ್ದ ಪುಟ್ಟ ಮಕ್ಕಳು, ಸಾಂತಾಕ್ಲಾಸ್ ಧಿರಿಸಿನಲ್ಲಿ ಕಾಣಿಸಿಕೊಂಡ ಪುಟಾಣಿಗಳು, ಇನ್ನಿತರ ಉಡುಗೆಗಳಲ್ಲಿ ನರ್ತಿಸುವ ಮೂಲಕ ಕ್ರಿಸ್‌ಮಸ್ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.ಶಾಲೆಯ ಶಿಕ್ಷಕಿಯರು ಮಕ್ಕಳಿಗೆ ಅಂದ-ಚೆಂದದ ಉಡುಗೆಗಳನ್ನು ತೊಡಿಸಿ ಹಾಡಿಗೆ ತಕ್ಕಂತೆ ಮಕ್ಕಳನ್ನು ವೇದಿಕೆಗೆ ಕಳುಹಿಸುವ ಮೂಲಕ ನೃತ್ಯರೂಪಕ ಉತ್ತಮವಾಗಿ ಮೂಡಿಬರುವಲ್ಲಿ ಮುತುವರ್ಜಿ ವಹಿಸಿದ್ದರು. ಮಕ್ಕಳ ಪ್ರದರ್ಶನಕ್ಕೆ ಬೆರಗಾದ ಪೋಷಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ನೃತ್ಯದ ಫೋಟೋಗಳನ್ನು ಸೆರೆಹಿಡಿದು ಖುಷಿಪಟ್ಟರು. ಎಲ್ಲಾ ಮಕ್ಕಳೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸೇಂಟ್ ಜೋಸೆಫ್ ಶಾಲೆಯ ಫಾದರ್ ಆ್ಯಂಟನಿ ಕುಮಾರ್ ಮಾತನಾಡಿ, ಒಂದು ಸಾಮಾನ್ಯ ಕಲ್ಲು ಶಿಲ್ಪಿ ಕೈಗೆ ಸಿಕ್ಕಿ ಸುಂದರ ಮೂರ್ತಿಯಾಗುವುದೋ ಅದೇ ರೀತಿಯ ಶಿಕ್ಷಕರು ಹೇಳಿದ ಪಾಠವನ್ನು ಆಸಕ್ತಿಯಿಂದ ಆಲಿಸಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆಗ ಮಕ್ಕಳೂ ಗರ್ಭಗುಡಿಯಲ್ಲಿರುವ ಶಿಲೆಯಂತಾಗುವರು ಎಂದು ವಿಶ್ಲೇಷಿಸಿದರು.ನಮ್ಮೊಳಗೆ ಒಂದು ಶಕ್ತಿ ಇದೆ. ದೇವರು ಗುಡಿ, ಚರ್ಚ್, ಮಸೀದಿಯಲ್ಲಿ ಮಾತ್ರವಲ್ಲ. ದೇವರು ನಮ್ಮೊಳಗೇ ಇದ್ದಾರೆ. ಅವರನ್ನು ಹುಡುಕುವ ಪ್ರಯತ್ನ ಮಾಡಬೇಕು. ಹುಡುಕಿದಾಗ ನಾವು ಏನಾದರೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಾದವರು ಇವತ್ತು ಓದಬೇಕು. ಆಗ ನಾಳಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು ಮಾತನಾಡಿ, ಮಕ್ಕಳಲ್ಲಿ ಅದ್ಭುತ ಪ್ರತಿಭೆ ಇದೆ ಎನ್ನುವುದಕ್ಕೆ ಈ ನೃತ್ಯರೂಪಕವೇ ಸಾಕ್ಷಿ. ಯೇಸು ಹುಟ್ಟಿದ ಪ್ರಸಂಗವನ್ನು ನೃತ್ಯದ ಮೂಲಕ ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ. ಇಂತಹ ಪ್ರತಿಭೆಗಳು ಇನ್ನೂ ಹೆಚ್ಚು ಬೆಳವಣಿಗೆ ಕಾಣಬೇಕು ಎಂದು ಆಶಿಸಿದರು.ಮಕ್ಕಳೂ ಕೂಡ ದೇವರಿಗೆ ಸಮಾನರು. ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ. ಜಾತಿ-ಮತ-ಧರ್ಮ ಇರುವುದಿಲ್ಲ. ಎಲ್ಲರೂ ಒಟ್ಟಾಗಿ ವಿಶ್ವಮಾನವರಂತಿರುತ್ತಾರೆ. ಅದೇ ರೀತಿ ಮಕ್ಕಳು ಬೆಳೆದ ನಂತರವೂ ವಿಶ್ವಮಾನವರಾಗಿಯೇ ಬದುಕನ್ನು ನಡೆಸಬೇಕು. ಎಲ್ಲರೂ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುವಂತೆ ಆಶಿಸಿದರು.ಕೊನೆಯಲ್ಲಿ ಕಾರ್ಮೆಲ್ ಕಾನ್ವೆಂಟ್‌ನ ಸಿಸ್ಟರ್ಸ್‌ಗಳು ಯೇಸುವಿನ ಕುರಿತಾದ ಹಾಡೊಂದನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಕಾರ್ಮೆಲ್ ಕಾನ್ವೆಂಟ್‌ನ ವ್ಯವಸ್ಥಾಪಕಿ ಸಿಸ್ಟರ್ ಡಾ.ಅಶ್ವಿನಿ, ಸಂಚಾಲಕಿ ಸಿಸ್ಟರ್ ರೋಸ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೌಲಿನ್, ಪ್ರಾಥಮಿಕ ಶಾಲೆ ಶಿಕ್ಷಕಿ ಸಜನಾ, ಲಲಿತಾ, ಫ್ರಾನ್ಸ್‌ಲಿನ್, ಕುಮಾರಸ್ವಾಮಿ ಇದ್ದರು.೨೩ಕೆಎಂಎನ್‌ಡಿ-೧ಮತ್ತು ೨ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಯೇಸು ಕ್ರಿಸ್ತನ ಜನನದ ಕುರಿತಾದ ನೃತ್ಯರೂಪಕವನ್ನು ಅದ್ಭುತವಾಗಿ ಪ್ರದರ್ಶಿಸಿದರು.೨೩ಕೆಎಂಎನ್‌ಡಿ-೩ಕಾರ್ಮೆಲ್ ಕಾನ್ವೆಂಟ್ ಸಿಸ್ಟರ್ಸ್‌ಗಳು ಯೇಸುವಿನ ಕುರಿತಾದ ಹಾಡೊಂದನ್ನು ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ