- ಚರ್ಚ್ ಗಳಲ್ಲಿ ಶ್ರದ್ದಾ, ಭಕ್ತಿಯಿಂದ ಏಸುಕ್ರಿಸ್ತನ ಪೂಜೆ
ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸೋಮವಾರ ಸಂಭ್ರಮ, ಸಡಗರದಿಂದ ಕ್ರೈಸ್ತ ಬಾಂಧವರು ಆಚರಿಸಿದರು.
ಕ್ರಿಸ್ ಮಸ್ ಅಂಗವಾಗಿ ನಗರದ ವಿವಿಧ ಚರ್ಚ್ ಗಳು ಕ್ರೈಸ್ತ ಬಾಂಧವರಿಂದ ನೆರೆದಿದ್ದರು. ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಚರ್ಚ್ ಗಳಲ್ಲಿ ಶ್ರದ್ದಾ, ಭಕ್ತಿಯಿಂದ ಏಸುಕ್ರಿಸ್ತನನ್ನು ಪೂಜಿಸಲಾಯಿತು.ಕ್ರೈಸ್ತ ಬಾಂಧವರು ಭಾನುವಾರ ರಾತ್ರಿಯಿಂದಲೇ ಚರ್ಚ್ ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಸಂತ ಫಿಲೋಮಿನಾ ಚರ್ಚ್ ನಲ್ಲಿ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಫಾ. ಬರ್ನಾರ್ಡ್ ಮೋರಸ್ ಸಮ್ಮುಖದಲ್ಲಿ ಮಿಡ್ ನೈಟ್ ಮಾಸ್ ನಡೆಯಿತು. ಭಾನುವಾರ ರಾತ್ರಿ 11 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ನಂತರ ರಾತ್ರಿಯಿಡೀ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು.ಅಲ್ಲದೆ, ಕರೋಲ್ ಗೀತೆಗಳನ್ನೂ ಹಾಡಲಾಯಿತು. ಫಾ. ಬರ್ನಾರ್ಡ್ ಮೋರಸ್ ಕ್ರಿಸ್ ಮಸ್ ಸಂದೇಶ ನೀಡಿದರು. ವಿಶ್ವ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.
ಸೋಮವಾರ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ಪ್ರತಿ ಒಂದು ಗಂಟೆಗೊಮ್ಮೆ ವಿಶೇಷ ಪೂಜೆ ಸಲ್ಲಿಸಲಾಯಿತು. ಚರ್ಚ್ ಕಾಂಪೌಂಡ್ ಆವರಣದಲ್ಲಿ ಎಲ್.ಇ.ಡಿ ಪರದೆ ಅಳವಡಿಸಿ ಪ್ರಾರ್ಥನೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರೈಸ್ತ ಬಾಂಧವರು ಯೇಸು, ಸಂತ ಜೋಸೆಫ್, ಸಂತ ಮೇರಿ ಪ್ರತಿಮೆ ಎದುರು ಮೇಣದ ಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿ ಯೇಸು ಕ್ರಿಸ್ತನ ಜಪ ಮಾಡಿದರು.ಚರ್ಚ್ ಹೊರಭಾಗದಲ್ಲಿ ಗೋದಲಿಯನ್ನು ನಿರ್ಮಿಸಿದ್ದು, ಭಾನುವಾರ ರಾತ್ರಿಯೇ ಬಾಲ ಏಸುವಿನ ಮೂರ್ತಿಯನ್ನು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಫಾ. ಬರ್ನಾರ್ಡ್ ಮೋರಸ್ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು. ಇವರಿಗೆ ಫಾದರ್ ಗಳಾದ ಸ್ಟ್ಯಾನಿ ಅಲ್ಮೆಡಾ, ಪೀಟರ್ ಸಾಥ್ ನೀಡಿದರು.
ಗೋದಲಿಯ ಪಕ್ಕದಲ್ಲಿ ಸುಂದರವಾದ ಸಂತ ಕ್ಲಾಸ್ ನನ್ನು ನಿರ್ಮಿಸಲಾಗಿದ್ದು, ಅದು ಎಲ್ಲರ ಗಮನ ಸೆಳೆಯಿತು. ಇಸ್ರೆಲ್ ನ ಬೆತ್ಲೆಹೆಮ್ ನ ಕೊಟ್ಟಿಗೆಯೊಂದರಲ್ಲಿ ಜನ್ಮಪಡೆದ ಬಾಲ ಯೇಸು ಬೊಂಬೆ, ಯೇಸುವಿನ ತಂದೆ ಜೋಸೆಫ್, ತಾಯಿ ಮೇರಿ ಬೊಂಬೆಗಳ ಜೊತೆಗೆ ಕುರಿ, ಹಸು, ಒಂಟೆ ಇನ್ನಿತರ ಪ್ರಾಣಿಗಳ ಗೊಂಬೆಗಳು ಕಣ್ಮನ ಸೆಳೆದವು.ಸಂತ ಫಿಲೋಮಿನಾ ಚರ್ಚ್ ಮಾತ್ರವಲ್ಲದೆ ವೆಸ್ಲಿ ಚರ್ಚ್, ಹಾರ್ಡ್ವಿಕ್ ಯೇಸು ಕರುಣಾಲಯ, ಯೇಸು ಕೃಪಾಲಯ, ಬಾಲ ಯೇಸು ಮಂದಿರ, ಬಾಲ ಕ್ರಿಸ್ತಾಲಯ ಸೇರಿದಂತೆ ನಗರದ ಹಲವು ಚರ್ಚ್ ಗಳಲ್ಲಿ ಕ್ರಿಸ್ ಮಸ್ ಆಚರಿಸಲಾಯಿತು.
ಶಾಂತಿ ಸಂದೇಶ ಪಾಲಿಸಿಮೈಸೂರಿನ ಹೈವೇ ವೃತ್ತದ ಬಳಿಯ ಬಿಷಪ್ ಹೌಸ್ ನಲ್ಲಿ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಫಾ. ಬರ್ನಾರ್ಡ್ ಮೋರಸ್ ಅವರನ್ನು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಸೋಮವಾರ ಭೇಟಿಯಾಗಿ, ಹೂಗುಚ್ಛ ನೀಡಿ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ನಾಡಿನ ಜನರಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಎಚ್. ವಿಶ್ವನಾಥ್ ಅವರು, ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾನ್ ವ್ಯಕ್ತಿ ಯೇಸು. ಯೇಸುವಿನ ಶಾಂತಿ ಸಂದೇಶಗಳನ್ನು ಜನರು ಪಾಲಿಸಬೇಕು ಎಂದು ಕರೆ ನೀಡಿದರು.ಇತ್ತೀಚೆಗೆ ಸಮಾಜದಲ್ಲಿ ಶಾಂತಿ ಕಡಿಮೆಯಾಗುತ್ತಿದೆ. ಶಾಂತಿಯ ಧೂತ ಯೇಸುವಿನ ದಯೆಯಿಂದ ಪ್ರತಿಯೊಬ್ಬರಿಗೂ ಶಾಂತಿ ಸಿಗಲೆಂದು ಬಯಸುತ್ತೇನೆ. ಪ್ರಭು ಯೇಸು ಹೊಸ ವರ್ಷದ ಆರಂಭದಲ್ಲಿ ನಾಡಿನ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲಿ. 2024ರಲ್ಲಿ ಎಲ್ಲರಿಗೂ ಒಳಿತು ಉಂಟುಮಾಡಲಿ. ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
- ಫಾ. ಬರ್ನಾರ್ಡ್ ಮೋರಸ್, ಆಡಳಿತಾಧಿಕಾರಿ, ಮೈಸೂರು ಧರ್ಮಕ್ಷೇತ್ರ