ಕನ್ನಡಪ್ರಡ ವಾರ್ತೆ ರಾಯಚೂರು
ಏಸುಕ್ರಿಸ್ತನ ಜನ್ಮದಿನ ನಿಮಿತ್ತ ಕ್ರೈಸ್ತ ಬಾಂಧವರು ಆಚರಿಸುವ ಕ್ರಿಸ್‌ಮಸ್ ಹಬ್ಬವನ್ನು ಎಲ್ಲಡೆ ಸಂಭ್ರಮ-ಸಡಗರದಿಂದ ಬುಧವಾರ ಆಚರಿಸಲಾಯಿತು.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿ ತಾಲೂಕುಗಳಾದ ಮಾನ್ವಿ, ದೇವದುರ್ಗ, ಸಿರವಾರ, ಮಸ್ಕಿ, ಸಿಂಧನೂರು, ಲಿಂಗಸುಗೂರು, ಅರಕೇರಾ ತಾಲೂಕು, ಹೋಬಳಿ ಮತ್ತು ಗ್ರಾಮೀಣ ಭಾಗದ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ನಿಮಿತ್ತ ವಿಶೇಷ ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ನಡೆಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತಬಾಂಧಾವರು ಸಮೀಪದ ಚರ್ಚ್‌ಗಳಿಗೆ ತೆರಳಿ ಕೇಕ್ ಕತ್ತರಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿ, ಏಸುವಿನ ಜೀವನ, ಸಾಧನೆ, ಪವಾಡಗಳನ್ನು ಮೆಲುಕು ಹಾಕಿದ್ದರು.ಕ್ರಿಸ್‌ಮಸ್ ವಿಶೇಷಗಳಲ್ಲಿ ಏಸುವಿನ ಜನ್ಮಸ್ಥಳ, ಕ್ರಿಸ್‌ಮಸ್ ಟ್ರೀ, ಆಕರ್ಷಕ ದೀಪಾಲಂಕಾರಗಳು ಹಬ್ಬದ ಕಳೆಯನ್ನು ಹೆಚ್ಚಿಸಿತು.
ಕ್ರೈಸ್ತ ಬಾಂಧಾವರು ತಮ್ಮ ತಮ್ಮ ಮನೆಗಳಲ್ಲಿ ಏಸುಕ್ರಿಸ್ತನ ಗೋದಲಿಯನ್ನು ಅಲಂಕೃತಗೊಳಿಸಿ, ದೀಪಗಳನ್ನು ಅಳವಡಿಸಿದ್ದರು.ಸ್ಥಳೀಯ ಇನ್‌ಫೆಂಟ್ ಜೀಸಸ್ ಶಾಲೆ, ಮೆಥೋಡಿಸ್ಟ್, ಕ್ಯಾಥೋಲಿಕ್, ಸೆಂಟ್ ಮೇರಿ, ಅಗಾಪೆ ಚರ್ಚ್‌ಗಳಲ್ಲಿ, ಫಾನ್ಸಿಸ್ ದೇವಾಲಯಗಳಲ್ಲಿ ಕ್ರೈಸ್ತ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ ಇಡೀ ದಿನ ಸಂತ ಏಸುಕ್ರಿಸ್ತನ ಸ್ಮರಣೆ ಮಾಡಿದರು.
ಚರ್ಚ್‌ನಲ್ಲಿ ಕ್ರೈಸ್ತ ಧರ್ಮಗುರುಗಳು ಸಾಮೂಹಿಕ ಪ್ರಾರ್ಥನೆಗೆ ಮಾರ್ಗದರ್ಶನ ನೀಡಿ, ಏಸುಕ್ರಿಸ್ತ ನೀಡಿರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ನೆರೆದ ಭಕ್ತರಿಗೆ ಸಂದೇಶವನ್ನು ರವಾನಿಸಿದರು.ಸ್ಥಳೀಯ ಮೆಥೋಡಿಸ್ಟ್ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಶಿವರಾಜ ಪಾಟೀಲ್ ಶುಭಾಶಯ ಕೋರಿ, ಪ್ರಪಂಚದ ಎಲ್ಲ ಧರ್ಮಗಳ ಉದ್ದೇಶ ಶಾಂತಿ, ಸಹಭಾಳ್ವೆ, ನೆಮ್ಮದಿ ಹಾಗೂ ಸಾಮರಸ್ಯದ ಜೀವನ ನಡೆಸುವುದಾಗಿದ್ದು, ಆ ಅಂಶಗಳಡಿಯಲ್ಲಿಯೇ ಕ್ರೈಸ್ತ ಧರ್ಮದ ಸ್ಥಾಪನೆಗೊಂಡಿದೆ. ಶಾಂತಿ ಪ್ರಿಯನಾಗಿರುವ ಏಸುಕ್ರಿಸ್ತನು ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ದೇವನಾಗಿದ್ದು, ಅದಕ್ಕಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚಿನ ಜನರು ಏಸುಕ್ರಿಸ್ತನನ್ನು ಆರಾಧಿಸುತ್ತಾರೆ. ನಮ್ಮೆಲ್ಲರಿಗೂ ಏಸುಕ್ರಿಸ್ತ ಸುಖ-ಶಾಂತಿ ಹಾಗೂ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಹೇಳಿದರು.
ಈ ಸಂದಭರ್ದಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ಮುಖಂಡರಾದ ರವೀಂದ್ರ ಜಲ್ದಾರ್, ಮೊಹಮ್ಮದ ಶಾಲಂ, ವೈ.ಗೋಪಾಲರಡ್ಡಿ, ಜಯಣ್ಣ, ರಮೇಶ, ನಾಗರಾಜ, ಸನ್ನಿ ಮಹಾರಾಜ್, ಬಿನ್ನಿ, ರಾಜು, ಸೇರಿ ಕ್ರೈಸ್ತ ಧರ್ಮಗುರುಗಳು, ಬೋಧಕರು, ಸಮಾಜದ ಪ್ರಮುಖರು, ಮಹಿಳೆಯರು, ಮಕ್ಕಳು ಸೇರಿ ಅನೇಕರು ಭಾಗವಹಿಸಿದ್ದರು.