ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಶುಗರ್ಸ್ ಅವರಿಗೆ ಎಲ್.ಆರ್.ಒ.ಟಿ. ಆಧಾರದ ಮೇಲೆ ಯಥಾಸ್ಥಿತಿಯಲ್ಲಿ ಗುತ್ತಿಗೆ ನೀಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಡಿ. ರವಿಶಂಕರ್ ತಿಳಿಸಿದರು.ಎರಡು ವರ್ಷಗಳ ಹಿಂದೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿದ್ದ ನಿರಾಣಿ ಶುಗರ್ಸ್ನವರು ಕಾಲಮಿತಿಯೊಳಗೆ ನೊಂದಣಿ ಮಾಡಿಕೊಳ್ಳದ್ದರಿಂದ ವಿಳಂಬದ ಅವಧಿಯನ್ನು ಮನ್ನಾ ಮಾಡಿ ಗುತ್ತಿಗೆ ಒಪ್ಪಂದವನ್ನ ಸಕ್ಷಮ ಪ್ರಾಧಿಕಾರದಲ್ಲಿ ನೊಂದಾಯಿಸಲು ಅನುಮತಿ ನೀಡುವಂತೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸಕ್ಕರೆ ಮತ್ತು ಕಬ್ಬು ಅಭಿವೃದ್ದಿ ಆಯುಕ್ತರಿಗೆ ವರದಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ನಾನು ಕಳೆದ ಬೆಳಗಾವಿ ಅಧಿವೇಶನದಲ್ಲಿ ಸದನದಲ್ಲಿ ಸಕ್ಕರೆ ಸಚಿವರಿಗೆ ಪ್ರಶ್ನೆ ಕೇಳುವ ಮೂಲಕ ಗಮನ ಸೆಳೆದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಯನ್ನು ಪರಿಹರಿಸುವ ಉತ್ತರ ನೀಡಿದ್ದರು ಜತೆಗೆ ಈ ಸಂಬಂಧ 2024ರ ಜ. 5ರಲ್ಲಿ ಸರ್ಕಾರಕ್ಕೆ ಪತ್ರ ಬರೆಯುವುದರೊಂದಿಗೆ ಮುಖ್ಯಮಂತ್ರಿಗಳು ಮತ್ತು ಸಕ್ಕರೆ ಸಚಿವರನ್ನು ಹತ್ತಾರು ಬಾರಿ ಭೇಟಿ ಮಾಡಿ ಕಬ್ಬು ಬೆಳೆಗಾರರ ಪರವಾಗಿ ಕೋರಿಕೆ ಸಲ್ಲಿಸಿದ ಹಿನ್ನೆಲೆ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.ಕಾರ್ಖಾನೆ ಗುತ್ತಿಗೆ ಪಡೆದುಕೊಳ್ಳಲು ನೊಂದಣಿ ಮಾಡುವ ಸಂಬಂಧ ಈಗಾಗಲೇ ನಾನು ನಿರಾಣಿ ಶುಗರ್ಸ್ಮಾಲೀಕರ ಜತೆಗೆ ಕೂಲಂಕುಶವಾಗಿ ಚರ್ಚೆ ಮಾಡಿದ್ದು ಕಾಲಮಿತಿಯೊಳಗೆ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿ ತ್ವರಿತವಾಗಿ ಕಬ್ಬು ಅರೆಯುವ ಕಾರ್ಯ ಆರಂಭಿಸುವಂತೆ ತಿಳಿಸಿದ್ದು, ಭವಿಷ್ಯದಲ್ಲಿ ಈ ಭಾಗದ ರೈತರ ಹಿತಕಾಯಲು ಬದ್ದನಾಗಿದ್ದೇನೆ ಎಂದು ಹೇಳಿದರು.
ಈ ಹಿಂದೆ 12 ವರ್ಷಗಳ ಕಾಲ ಹತ್ತು ಹಲವು ಕಾರಣಗಳಿಂದ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದ ಕಾರಣ 2020-21ರಲ್ಲಿ 40 ವರ್ಷ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ, ನೊಂದಣಿಯನ್ನು ಮಾಡಿಕೊಳ್ಳದೆ ಆತುತಾತುರವಾಗಿ ಕಾರ್ಖಾನೆ ಪ್ರಾರಂಭಿಸಿ ಪುನಃ ಮುಚ್ಚುವ ಸ್ಥಿತಿಗೆ ತರಲಾಗಿತ್ತು. ಇದನ್ನು ಅರಿತ ನಾನು ಈಗ ಕಬ್ಬು ಬೆಳೆಗಾರರಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಶಾಸಕನಾಗಿ ಜವಬ್ದಾರಿಯಿಂದ ನಡೆದುಕೊಂಡಿದ್ದೇನೆ ಎಂದರು.ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ನವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅನುಮತಿ ಮತ್ತು ಅನುಮೋದನೆ ನೀಡಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿ ಕ್ಷೇತ್ರದ ಆರ್ಥಿಕಾಭಿವೃದ್ದಿಗೆ ಕಾರಣರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಡಿ. ರವಿಶಂಕರ್ ಹೇಳಿದರು.