ಗುರುಶಾಂತ ಜಡೆಹಿರೇಮಠ
ದಾಂಡೇಲಿ: ಪ್ರೇಕ್ಷಕರ ಕೊರತೆಯಿಂದ ರಾಜ್ಯಾದ್ಯಂತ ಒಂದೊಂದೇ ಚಿತ್ರಮಂದಿರಗಳು ಬಂದಾಗತೊಡಗಿವೆ. ಇದಕ್ಕೆ ನಗರವೂ ಹೊರತಲ್ಲ. ನಗರದಲ್ಲಿದ್ದ ಎರಡೂ ಥೇಟರ್‌ಗಳು ಬಾಗಿಲು ಹಾಕಿದ್ದು, ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದೆ.ಒಂದು ಕಾಲದಲ್ಲಿ ಸಿನಿಮಾ ಪ್ರಿಯರಿಂದ ತುಂಬಿ ತುಳುಕುತ್ತಿದ್ದ ನಗರದ ಹೃದಯಭಾಗದಲ್ಲಿರುವ ಶ್ರೀಹರಿ ಮತ್ತು ಅಶೋಕ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿವೆ. ಅಶೋಕ ಚಿತ್ರಮಂದಿರ ಕೆಲವು ವರ್ಷಗಳ ಹಿಂದೆಯೇ ಪ್ರದರ್ಶನವನ್ನು ನಿಲ್ಲಿಸಿದ್ದು, ಶ್ರೀಹರಿ ಚಿತ್ರಮಂದಿರ ಕಳೆದ ಮಾರ್ಚ್‌ದಿಂದ ಬಾಗಿಲು ಹಾಕಿದೆ.ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚಿವೆ. ಅದಕ್ಕೆ ಪ್ರೇಕ್ಷಕರ ಕೊರತೆ ಒಂದು ಕಡೆಯಾದರೆ, ಮೊಬೈಲ್ ಅತಿಯಾದ ಬಳಕೆಯಿಂದಾಗಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದರಿಂದಾಗಿ ಈ ಹಿಂದೆ ಇದ್ದ ಚಿತ್ರಮಂದಿರಗಳ ವೈಭವದ ದಿನಗಳು ಕಾಣೆಯಾಗಿವೆ. ಅಲ್ಲದೇ ಚಿತ್ರಮಂದಿರಗಳು ನಿತ್ಯ ಹತ್ತಾರು ಮಂದಿ ಕೆಲಸ ಮಾಡುತ್ತಿದ್ದರು. ಇದರಿಂದ ಅವರ ಬದುಕಿನ ಬಂಡಿ ಸಾಗುತ್ತಿತ್ತು. ಆದರೆ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಅಲ್ಲಿನ ಕಾರ್ಮಿಕರು ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ.
ನಗರದ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮಂತ ಮಧುರಿ ಎಂಬವರು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿ, ಸದಾ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ನಗರದ ಚಿತ್ರಮಂದಿರಗಳು ಕಾಲನ ಹೊಡೆತಕ್ಕೆ ನಲುಗಿ ಮುಚ್ಚಿವೆ. ಇದರಿಂದ ಅನಿವಾರ್ಯವಾಗಿ ಬದುಕಿನ ಬಂಡಿ ಸಾಗಿಸಲು ಬೇರೆ ಉದ್ಯೋಗ ಕಂಡುಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.ಒಂದು ಕಾಲದಲ್ಲಿ ಪಾಳಿ ಹಚ್ಚಿ, ಟಿಕೆಟ್‌ಗಾಗಿ ಹೊಡೆದಾಡಿ, ಬ್ಲ್ಯಾಕ್‌ನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡಿ ಖುಷಿಪಡುತ್ತಿದ್ದ ಸಿನಿಪ್ರಿಯರು ಇದ್ದರು. ಅಂದು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಚಿತ್ರಗಳು ಜನಮನ ರಂಜಿಸಿ ಚಿತ್ರಗಳು ಬಗ್ಗೆ ಜನಮೆಚ್ಚುಗೆಗೆ ಪಾತ್ರವಾಗುತ್ತಿದ್ದವು. ಹೀಗಾಗಿ ಕುಟುಂಬ ಸಮೇತ ಜನರು ಆಗಮಿಸಿ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದರು.
ಕಾಲಾಂತರದಲ್ಲಿ ಯುಟ್ಯೂಬ್, ಒಟಿಟಿ, ಸಾಮಾಜಿಕ ಜಾಲತಾಣ ಹಾಗೂ ಟಿವಿ ಹಾವಳಿಯಿಂದ ಪ್ರೇಕ್ಷಕರು ಸಿನಿಮಾ ಮಂದಿರದಿಂದ ದೂರ ಉಳಿಯುವಂತಾಯಿತು. ಇದನ್ನೇ ನಂಬಿಕೊಂಡಿದ್ದ ಪ್ರತ್ಯಕ್ಷ, ಪರೋಕ್ಷ ಉದ್ಯೋಗಿಗಳು ನಿರುದ್ಯೋಗಿಗಳಾದರು. ಬೆಳ್ಳಿ ಪರದೆಯ ಗತವೈಭವ ಕನಸಿನ ಮಾತಾಗಿದೆ ಎನ್ನುವುದು ಸಿನಿಮಾ ಪ್ರೇಕ್ಷಕರ ಅಭಿಪ್ರಾಯ.ಖುಷಿ ಸಿಗದು: ನಾನು ೨೫೦ಕ್ಕೂ ಹೆಚ್ಚು ಚಲನಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿದ್ದೇನೆ. ಆದರೆ ಇತ್ತೀಚೆಗೆ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯಿಂದ ಬಂದಾಗುತ್ತಿರುವುದು ನನ್ನಂಥ ಸಿನಿಪ್ರಿಯರಿಗೆ ನಿರಾಸೆಯಾಗಿದೆ. ಮೊಬೈಲ್, ಒಟಿಟಿ ಸಿನಿಮಾ ನೋಡುವ ಅವಕಾಶವಿದ್ದರೂ ಚಿತ್ರಮಂದಿರದಲ್ಲಿ ವೀಕ್ಷಿಸಿದಷ್ಟು ಖುಷಿ ಸಿಗದು ಎಂದು ಸಿನಿಮಾ ಅಭಿಮಾನಿ ಪ್ರವೀಣಕುಮಾರ ಸುಲಾಖೆ ತಿಳಿಸಿದರು.ಆರ್ಥಿಕ ಹೊರೆ: ಇಂಟರ್‌ನೆಟ್, ಯುಟ್ಯೂಬ್, ಒಟಿಟಿ ಹಾವಳಿಯಿಂದ ಜನರು ಚಿತ್ರಮಂದಿರಕ್ಕೆ ಹೋಗುವುದನ್ನೇ ಮರೆತರು. ಹೀಗಾಗಿ ಮಧ್ಯಮ ವರ್ಗದ ಜನರು ಚಿತ್ರಮಂದಿರದಿಂದ ವಿಮುಖರಾದರು. ಆರ್ಥಿಕ ಹೊರೆ ತಾಳದೆ ಚಿತ್ರಮಂದಿರಗಳು ಕಣ್ಣು ಮುಚ್ಚಿದವು. ಮತ್ತೆ ಆ ಗತವೈಭವ ಮರುಕಳಿಸಲಿ ಎಂದು ಚಿತ್ರ ಅಭಿಮಾನಿ ಪ್ರವೀಣಕುಮಾರ ಕೆ.ಎಸ್. ತಿಳಿಸಿದರು.