ಸುಪ್ರೀಂಕೋರ್ಟ್ ನೀಡಿದ ನಿರ್ದೇಶನ ಪರಿಶೀಲನೆಗೆ ಸುತ್ತೋಲೆ: ರವೀಂದ್ರ ನಾಯ್ಕ

KannadaprabhaNewsNetwork | Published : Mar 17, 2025 12:33 AM

ಸಾರಾಂಶ

ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಅಧಿಕಾರ ವರ್ಗದ ಸದಸ್ಯರ ಸಮಿತಿಯಿಂದ ಅರಣ್ಯವಾಸಿ

ಕುಮಟಾ: ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಅಧಿಕಾರ ವರ್ಗದ ಸದಸ್ಯರ ಸಮಿತಿಯಿಂದ ಅರಣ್ಯವಾಸಿಯ ಅರ್ಜಿ ಮಂಜೂರು ಪ್ರಕ್ರಿಯೆ ಜರುಗಿಸದೇ 2019ರ ಫೆಬ್ರವರಿ 28ರಂದು ಸುಪ್ರೀಂ ಕೋರ್ಟ್‌ ನೀಡಿದ ಮಾರ್ಗದರ್ಶನದಂತೆ ತಿರಸ್ಕೃತ ಅರ್ಜಿಯ ಕಾರಣ ಪರಿಶೀಲಿಸಿ, ಮೌಲ್ಯೀಕರಣದೊಂದಿಗೆ ವರದಿ ಸಲ್ಲಿಸಲು ಮಾತ್ರ ಅಪೂರ್ಣ ಸಮಿತಿಗೆ ಅಧಿಕಾರ ನೀಡಿ ರಾಜ್ಯಾದ್ಯಂತ ಅನ್ವಯಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಭಾನುವಾರ ಕುಮಟಾ ತಾಲೂಕಿನ ಅಳಕೋಡ (ಕತಗಾಲ), ಮೂರೂರು, ಕಲ್ಲಬ್ಬೆ ಗ್ರಾಪಂ ವ್ಯಾಪ್ತಿಯ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾದಲ್ಲಿ ಸರ್ಕಾರದ ಕಾರ್ಯದರ್ಶಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಂದೀಪ ಹೊರಡಿಸಿದ ಸುತ್ತೋಲೆಯನ್ನು ಪ್ರದರ್ಶಿಸಿದರು.

ನಾಮನಿರ್ದೇಶನ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳನ್ನ ಪುನರ್ ಪರಿಶೀಲನೆ ಕಾರ್ಯವನ್ನು ಮುಂದಿನ ನಿರ್ದೇಶನದವರೆಗೆ ಸ್ಥಗಿತಗೊಳಿಸಲು ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಅರ್ಜಿಗಳ ತಿರಸ್ಕೃತಕ್ಕೆ ಕಾರಣವಾದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಆದೇಶದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.

ಅಸ್ತಿತ್ವದಲ್ಲಿರುವ ಸಮಿತಿಗಳು ಹಿಂದಿನ ಮಂಜೂರು ಪ್ರಕ್ರಿಯೆಯಲ್ಲಿ ಕಾನೂನಿನ ವಿಧಿವಿಧಾನ ಅನುಸರಿಸುವಲ್ಲಿ ಉಂಟಾದ ಲೋಪ, ಅರ್ಜಿಗಳನ್ನು ತಿರಸ್ಕರಿಸುವಾಗ ಸಾಕ್ಷಿಗಳ ದಾಖಲೆಗಳ ಕುರಿತು ಪರಿಶೀಲಿಸಿ ಅರಣ್ಯ ಹಕ್ಕು ಕಾಯಿದೆಯ ನಿಯಮ ಉಲ್ಲಂಘಿಸಲಾಗಿದೆ ಎಂಬ ಬಗ್ಗೆ ಈ ಹಿಂದೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿದಾರರನ್ನು ಒಕ್ಕಲೆಬ್ಬಿಸಿರುವ ಮಾಹಿತಿ ಮತ್ತು ಸಮಿತಿಗಳು ತಿರಸ್ಕೃತಗೊಂಡ ಅರ್ಜಿಗಳನ್ನ ಪುನರ್ ಪರಿಶೀಲನೆ ಮಾಡಿರುವ ಮಾಹಿತಿ ಸಿದ್ಧಪಡಿಸುವಂತೆ ಈ ಸುತ್ತೋಲೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ ವಹಿಸಿದರು. ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಸ್ವಾಗತಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಜೀನಚಂದ್ರ ನಾಯಕ್, ಕೃಷ್ಣಾನಂದ್ ವೆರ್ಣೇಕರ, ಗ್ರೀನ್ ಕಾರ್ಡ್‌ ಪ್ರಮುಖರಾದ ಸೀತಾರಾಮ ನಾಯ್ಕ ಬುಗರಿಬೈಲ್, ರಾಜೀವ ಗೌಡ, ಪ್ರಕಾಶ ನಾಯ್ಕ, ಅತೋನಿ ಪಿಂಟೋ, ಪ್ರಕಾಶ ನಾಯ್ಕ, ಸುಲೋಚನಾ ಮುಕ್ರಿ, ಸುಲೋಚನಾ ನಾಯ್ಕ, ರವಿಚಂದ್ರ, ಜಗದೀಶ ನಾಯ್ಕ ಉಪಸ್ಥಿತರಿದ್ದರು.

ಪ್ರತಿ ತಿಂಗಳ 5 ದಿನಾಂಕದ ಒಳಗೆ ವರದಿ:

ಅರಣ್ಯವಾಸಿಗಳ ಅರ್ಜಿ ಪರಿಶೀಲಿಸಿ ಜಿಲ್ಲಾ ಅರಣ್ಯ ಹಕ್ಕು ಸಮಿತಿ ಪ್ರತಿತಿಂಗಳು 5ನೇ ತಾರೀಖಿನೊಳಗೆ ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿಯು ಸರ್ಕಾರಕ್ಕೆ ವರದಿ ನೀಡಬೇಕೆಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Share this article