ಕನ್ನಡಪ್ರಭ ವಾರ್ತೆ ಮಂಗಳೂರು
ಸುರತ್ಕಲ್ ಮದ್ಯ ವಾರ್ಡ್‌ನಲ್ಲಿ ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು ಇದೀಗ ನಾಲ್ಕೈದು ದಿನಗಳಿಗೊಮ್ಮೆಯೂ ಸರಿಯಾಗಿ ಬರುತ್ತಿಲ್ಲ. ಮಾರುಕಟ್ಟೆಕಾರ್ಯಾರಂಭಿಸಿ ನಾಲ್ಕು ವರ್ಷವಾದರೂ ಲಿಫ್ಟ್ ಇಲ್ಲ, ಮಾರುಕಟ್ಟೆ ನಿರ್ವಹಣೆ ಮಾಡಲಾಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪ ಸರಿಯಾಗಿ ಉರಿಯುತ್ತಿಲ್ಲ. ರಸ್ತೆ ಬದಿ ತಡೆಗೋಡೆ ನಿರ್ಮಿಸಿಲ್ಲ. ಕೋಟಿಗಟ್ಟಲೆ ಹಣ ಸುರಿದು ಅಭಿವೃದ್ಧಿ ಪಡಿಸಿದ ಗುಜ್ಜರಕೆರೆ ಇನ್ನೂ ದೇವರ ತೀರ್ಥಕೆರೆಯಾಗಿಲ್ಲ.ಇದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಮೇಯರ್ ಅವರ ಫೋನ್-ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾದ ನಾಗರಿಕರ ದೂರುಗಳು.
ಮೇಯರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 27 ಮಂದಿ ನಾಗರಿಕರು ಕರೆ ಮಾಡಿ ತಮ್ಮ ಅಹವಾಲು ತೋಡಿಕೊಂಡರು. ಕೆಲವರು ಹಿಂದಿನ ಹಲವು ಬಾರಿ ನೀಡಿರುವ ದೂರುಗಳನ್ನೇ ಪುನರಾವರ್ತಿಸಿದರು. ಮೇಯರ್ ಸುಧೀರ್ ಶೆಟ್ಟಿ ಅವರು ಸಮಾಧಾನದಿಂದ ಉತ್ತರಿಸಿದರು.ಕಾವೂರಿನ ಚಂದ್ರಶೇಖರ್ ಎಂಬವರು ಕರೆ ಮಾಡಿ, ಕಾವೂರು ಮಾರುಕಟ್ಟೆನಾಲ್ಕು ವರ್ಷದ ಹಿಂದೆ ಉದ್ಘಾಟನೆಯಾಗಿದೆ. ಆದರೆ ಮಾರುಕಟ್ಟೆಯ ಲಿಫ್ಟ್ ಇನ್ನೂ ಕಾರ್ಯಾರಂಭಿಸಿಲ್ಲ. ಕಾವೂರು ಜಂಕ್ಷನ್‌ನ ರಸ್ತೆ ಬದಿಯಲ್ಲಿಯೇ ಅನಧಿಕೃತವಾಗಿ ವ್ಯಾಪಾರ ನಡೆಯುತ್ತಿದೆ. ಇದರಿಂದಾಗಿ ಲಕ್ಷಾಂತರ ರು. ಮಾರುಕಟ್ಟೆಯಲ್ಲಿ ಠೇವಣಿ ಹೂಡಿ ವ್ಯಾಪಾರ ಮಾಡುತ್ತಿರುವವರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬೊಂದೇಲ್‌ನಿಂದ ಕಾವೂರು ನಡುವೆ ಭಾನುವಾರ ಅಲ್ಲಲ್ಲಿ ತರಕಾರಿ ಮಾರಾಟ ನಡೆಯುತ್ತಿದೆ. ಈ ಸಂತೆ ವ್ಯಾಪಾರವನ್ನು ವಾರಕೊಮ್ಮೆ ಮಾರುಕಟ್ಟೆ ಎದುರು ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಮೇಯರ್ ಸುಧೀರ್ ಶೆಟ್ಟಿ ಪ್ರತಿಕ್ರಿಯಿಸಿ, ರಸ್ತೆ ಬದಿಯ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದರು.ಹಂಪನಕಟ್ಟೆವಿಶ್ವವಿದ್ಯಾನಿಲಯ ಕಾಲೇಜು ಎದುರಿನ ಪಾರ್ಕಿಂಗ್ ತೆರವುಗೊಳಿಸಬೇಕು. ರಸ್ತೆ ದಾಟಲು ಸ್ಕೈವಾಕ್ ವ್ಯವಸ್ಥೆ ಮಾಡಬೇಕು. ವಾರ್ಡ್ ಸಮಿತಿ ಸಭೆಗಳು ಆಗುತ್ತಿಲ್ಲ, ನಿಯಮಿತವಾಗಿ ಸಭೆ ನಡೆಸಬೇಕು. ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡಿದರೆ ಜನರು ನಡೆದಾಡಲು ಕಷ್ಟವಾಗುತ್ತಿದೆ, ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ಫುಟ್‌ಪಾತ್ ತೆರವುಗೊಳಿಸಬೇಕು ಎಂಬ ಆಗ್ರಹ ವ್ಯಕ್ತಗೊಂಡಿತು.
ಸುರತ್ಕಲ್ ಮಧ್ಯ ವಾರ್ಡ್‌ನಲ್ಲಿ ಮೂರು ದಿನವಾದರೂ ನೀರಿಲ್ಲ. ಹಿಂದೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು. ನಾಲ್ಕೈದು ದಿನಗಳ ಕಾಲ ನೀರು ಇಲ್ಲದಿರುವ ಸಮಸ್ಯೆ ಹಿಂದೆಯೂ ಏಪ್ರಿಲ್ ತಿಂಗಳಲ್ಲಿ ನಮ್ಮಲ್ಲಿ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಡಿಸೆಂಬರ್‌ನಲ್ಲಿಯೇ ಸಮಸ್ಯೆ ಉಂಟಾಗಿದೆ ಎಂಬ ಕೂಗು ಕೇಳಿಬಂತು.ಕದ್ರಿ ಮಾರುಕಟ್ಟೆನಿರ್ಮಾಣ ಆಗಿದೆ. ಆದರೆ ಅದನ್ನು ವ್ಯಾಪಾರಿಗಳಿಗೆ ಬಿಟ್ಟುಕೊಟ್ಟಿಲ್ಲ. ಜನರ ತೆರಿಗೆ ಹಣ ಪೋಲಾಗದಂತೆ ಕ್ರಮ ವಹಿಸಿ ಎಂದು ನಾಗರಿಕರೊಬ್ಬರು ಆಗ್ರಹಿಸಿದರು.
ಮಂಗಳೂರು ಪಾಲಿಕೆ ವ್ಯಾಪ್ತಿಯ ಸಿಯಾಳ ಚಿಪ್ಪು ಸಂಗ್ರಹಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಯಾಳ ಚಿಪ್ಪು ಹೊಸ ಏಜೆನ್ಸಿಗೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಪ್ರಸ್ತುತ ಟೆಂಡರ್ ವಹಿಸಿಕೊಂಡಿರುವವರು ಪಚ್ಚನಾಡಿ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ಘಟಕ ನಿರ್ಮಿಸಿ ಪ್ರಾಯೋಗಿಕ ನೆಲೆಯಲ್ಲಿ ಸಂಗ್ರಹ ಮಾಡಿ ಸಂಸ್ಕರಣೆ ಮಾಡುತ್ತಿದ್ದರೂ ಅವರಿಗೆ ಸೂಕ್ತ ಮಾರುಕಟ್ಟೆಇಲ್ಲದೆ ಚಿಪ್ಪುಗಳನ್ನು ರಾಶಿ ಹಾಕಿದ್ದಾರೆ. ಹಾಗಾಗಿ ಹೊಸ ಏಜೆನ್ಸಿಗೆ ಟೆಂಡರ್ ವಹಿಸಲು ಕ್ರಮ ವಹಿಸಲಾಗಿದೆ ಎಂದು ಕಮಿಷನರ್ ಆನಂದ್ ತಿಳಿಸಿದರು.