ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿ ಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣದ ಸ್ವಚ್ಛತೆ ಕಾಯ್ದುಕೊಳ್ಳುವ ಪೌರ ಕಾರ್ಮಿಕರು ಮೊದಲ ಆದ್ಯತೆಯಾಗಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಪೌರ ಕಾರ್ಮಿಕರು ಸಾಧ್ಯವಾದಷ್ಟು ರಕ್ಷಣಾ ಕವಚ ಬಳಸಿ ಸ್ವಚ್ಛತೆ ಮಾಡಬೇಕು. ಈ ವಿಚಾರದಲ್ಲಿ ಉದಾಸೀನತೆ ತೋರಬಾರದು. ಸಾರ್ವಜನಿಕರು ಕೂಡ ಪೌರ ಕಾರ್ಮಿಕರ ಜತೆ ಬೆರೆತು ತಮ್ಮ ಮಕ್ಕಳನ್ನು ಹೆಚ್ಚು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆ ಪಡೆಯುವ ಕಡೆ ಗಮನಹರಿಸಬೇಕು ಎಂದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಅವರು ಕೂಡ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸದಸನದಲ್ಲಿ ಚರ್ಚೆ ಮಾಡಲಿದ್ದಾರೆ ಎಂದರು.
ಈಗಾಗಲೇ ಪೌರ ಕಾರ್ಮಿಕರ ಕೆಲಸಕ್ಕೆ ಯಾರೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ಸಂಕಷ್ಟ ಎದುರಾಗುತ್ತದೆ. ದೇಶದಾದ್ಯಂತ ಕೊರೋನಾ ವ್ಯಾಪಿಸಿದಾಗ ಪೌರ ಕಾರ್ಮಿಕರು ಸೇನಾನಿಗಳಂತೆ ತಮ್ಮ ಜೀವದ ಹಂಗು ತೊರೆದು ಕ್ವಾರಂಟೈನ್‌ನಲ್ಲಿ ಕಟ್ಟಡಗಳನ್ನು ಸ್ವಚ್ಛಗೊಳಿಸಿದ್ದಾರೆ. ಅವರ ಸೇವೆ ಅನನ್ಯವಾಗಿದೆ ಎಂದು ಸ್ಮರಿಸಿದರು.ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲು ಸರ್ಕಾರ ಕಾಯ್ದೆ ತರಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರು, ಪುರಸಭೆ ಡಿ ಗ್ರೂಪ್ ನೌಕರರು, ನೀರುಗಂಟಿಗಳು ಹಾಗೂ ಪುರಸಭೆ ನೌಕರ ವರ್ಗವನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಎಲ್ಲರಿಗೂ ಹೋಳಿಗೆ ಊಟ ಬಡಿಸಲಾಯಿತು.