ವಿಜಯಪುರ : ತೆರೆದ ಕೊಳವೆ ಬಾವಿಗಳನ್ನು ಮುಚ್ಚುವಲ್ಲಿ ನಾಗರಿಕರ ಜವಾಬ್ದಾರಿಯೂ ಇರುತ್ತದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂಡಿ ತಾಲೂಕಿನ ಲಚ್ಯಾಣದ ತೋಟದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಮಗುವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಾತ್ವಿಕ ಸತೀಶ ಮುಜಗೊಂಡ ಮಗುವಿನ ರಕ್ಷಣಾ ಕಾರ್ಯಾಚರಣೆಯಂತೆ ಎಲ್ಲ ಕಾರ್ಯಚರಣೆಗಳು ಯಶಸ್ವಿಗೊಳ್ಳುವುದಿಲ್ಲ. ಕೆಲವೇ ಕೆಲವು ಯಶಸ್ವಿಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ತಾವು ಕೊರೆಸುವ ಕೊಳವೆ ಬಾವಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಜವಾಬ್ದಾರಿಯೂ ಇದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆ ಇದ್ದು, ಇನ್ನು ಮುಂದೆ ಸುತ್ತೋಲೆಯ ಮಾನದಂಡಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು. ಲಚ್ಯಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳವೆಬಾವಿ ತೆಗೆದ ಏಜೆನ್ಸಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಏ.3ರಂದು ಸಂಜೆ 5.30ರ ಸುಮಾರಿಗೆ ಕೊಳವೆ ಬಾವಿಗೆ ಸಿಲುಕಿದ ಮಗುವನ್ನು ಗಮನಿಸಿದ ಪಾಲಕರು ತಕ್ಷಣವೇ ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಸ್ಥಳೀಯರೊಂದಿಗೆ ಕಾರ್ಯಪ್ರವೃತ್ತರಾಗಿ ಮಗು ಯಶಸ್ವಿಯಾಗಿ ಸಂರಕ್ಷಿಸಲು ಸಾಧ್ಯವಾಗಿದೆ. ಇದಕ್ಕೆ ಕಲಬುರಗಿಯಿಂದ ಎಸ್‌ಡಿಆರ್‌ಎಫ್ ಹಾಗೂ ಹೈದ್ರಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡಗಳು ಬಂದು ಕಾರ್ಯಾಚರಣೆ ಯಶಸ್ವಿಗೊಳಿಸಿವೆ.
ಜಿಲ್ಲಾ ಅಗ್ನಿಶಾಮಕ ದಳದ ಸಹಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವೈದ್ಯರು ಮಗುವಿನ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯೂ ಸಾಕಷ್ಟು ಅನುಕೂಲ ಒದಗಿಸಿತು. ಪೊಲೀಸ್ ಇಲಾಖೆ ಸೇರಿ 200 ರಿಂದ 300 ಸಿಬ್ಬಂದಿ ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಭಾಗವಹಿಸಿದವರಿಗೆಲ್ಲರಿಗೂ ಅಭಿನಂದನೆಗಳು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶಿಕೇಷ ಸೋನಾವಣೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ, ಡಿಎಚ್‌ಒ ಬಸವರಾಜ ಹುಬ್ಬಳ್ಳಿ ಹಾಗೂ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ಇದ್ದರು.