ಬಾರ್ ಸ್ಥಳಾಂತರಕ್ಕೆ ನಾಗರಿಕರ ಒತ್ತಾಯ, ಅಬಕಾರಿ ಉಪಆಯುಕ್ತರಿಗೆ ಮನವಿ

KannadaprabhaNewsNetwork |  
Published : Jan 30, 2025, 12:30 AM IST
ಬಾರ್‌ ಸ್ಥಳಾಂತರಿಸಲು ಒತ್ತಾಯಿಸಿ ಶಿವಗಿರಿಯ ನಾಗರಿಕರ ನಿಯೋಗದಿಂದ ಬುಧವಾರ ಅಬಕಾರಿ ಉಪಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಲಿಂಗರಾಜನಗರ ರಸ್ತೆಯಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಮತ್ತು ರೆಸ್ಟೋರೆಂಟ್‌ನಿಂದಾಗಿ ಸ್ಥಳೀಯ ನಿವಾಸಿಗಳಿಗೆ ಹಲವು ತೊಂದರೆಯಾಗುತ್ತಿದೆ. ಈ ಬಾರ್‌ನಲ್ಲಿ ಮದ್ಯ ಖರೀದಿಸುವ ಕೆಲವರು ಅಕ್ಕಪಕ್ಕದ ಪುಟ್‌ಪಾತ್‌ ಮೇಲೆ ಕುಳಿತು ರಾಜಾರೋಷವಾಗಿ ಮದ್ಯಸೇವನೆ ಮಾಡುತ್ತಾರೆ.

ಹುಬ್ಬಳ್ಳಿ:

ಇಲ್ಲಿನ ಲಿಂಗರಾಜ ನಗರದ ಬಾರ್‌ನ ಪಾರ್ಕಿಂಗ್‌ ಜಾಗದಲ್ಲಿ ಮಂಗಳವಾರ ನಡೆದ ಯುವಕನೊಬ್ಬನ ಕೊಲೆಯ ಹಿನ್ನೆಲೆಯಲ್ಲಿ ಲಿಂಗರಾಜ ನಗರದ ಶಿವಗಿರಿಯ ನಾಗರಿಕರ ನಿಯೋಗ ಅಬಕಾರಿ ಉಪ ಆಯುಕ್ತ ರಮೇಶಕುಮಾರ ಕೆ. ಅವರನ್ನು ಬುಧವಾರ ಭೇಟಿ ಮಾಡಿ ಬಾರ್‌ ಸ್ಥಳಾಂತರಿಸಲು ಒತ್ತಾಯಿಸಿದೆ.

ಈ ವೇಳೆ ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಮಾತನಾಡಿ, ಲಿಂಗರಾಜನಗರ ರಸ್ತೆಯಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಮತ್ತು ರೆಸ್ಟೋರೆಂಟ್‌ನಿಂದಾಗಿ ಸ್ಥಳೀಯ ನಿವಾಸಿಗಳಿಗೆ ಹಲವು ತೊಂದರೆಯಾಗುತ್ತಿದೆ. ಈ ಬಾರ್‌ನಲ್ಲಿ ಮದ್ಯ ಖರೀದಿಸುವ ಕೆಲವರು ಅಕ್ಕಪಕ್ಕದ ಪುಟ್‌ಪಾತ್‌ ಮೇಲೆ ಕುಳಿತು ರಾಜಾರೋಷವಾಗಿ ಮದ್ಯಸೇವನೆ ಮಾಡುತ್ತಾರೆ. ರಾತ್ರಿ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು, ಮಹಿಳೆಯರು, ಮಕ್ಕಳ ಮೇಲೆ ಮದ್ಯವ್ಯಸನಿಗಳಿಂದ ತೊಂದರೆಯಾಗುತ್ತಿದೆ. ಅಲ್ಲದೇ ಈ ಬಾರ್‌ನ ಪಕ್ಕದಲ್ಲಿರುವ ಉದ್ಯಾನದಲ್ಲಿ ಕುಡಿದ ಮದ್ಯದ ಬಾಟಲಿಗಳನ್ನು ಎಲ್ಲಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ರಾತ್ರಿಯ ಸಾರ್ವಜನಿಕರು ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ತಮ್ಮ ದೂರಿದ್ದಾರೆ.

ಕಳೆದ ಮಂಗಳವಾರ ಇದೇ ಬಾರ್‌ನ ಪಾರ್ಕಿಂಗ್ ಜಾಗದಲ್ಲಿ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣ‍ವಾಗಿದೆ. ಈ ಕೂಡಲೇ ಈ ಬಾರ್‌ನ್ನು ಬೇರೆಡೆ ಸ್ಥಳಾಂತರಿಸಿ ಇಲ್ಲಿನ ನಿವಾಸಿಗಳಿಗೆ ಮುಕ್ತಿ ನೀಡಬೇಕು. ವಿಳಂಬ ನೀತಿ ತೋರಿದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ನಿವಾಸಿಗಳೆಲ್ಲ ಸೇರಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಪ್ರೊ. ಡ್ಯಾನಿಯಲ್ ಹೊಸಕೇರಿ, ವಿ. ರುದ್ರನಾಯಕ, ಎ.ಎಫ್. ಹೊಸಮನಿ, ಎಸ್.ಎಸ್. ಖಾದ್ರಿ, ಜಿ.ಎಫ್. ಅಪ್ಪಣ್ಣವರ, ಮಲ್ಲಪ್ಪ ಕೋಟಿ, ಮೋಹನ ಏಣಗಿ, ಪ್ರೇಮ್ ನಾಯಕ, ಡಾ. ರವಿ ರಾಠೋಡ, ಡಾ. ಜಯರಾಜ್ ಸಿಂಧೂರ, ಪುಂಡಲಿಕ ವಡೇಕರ, ಹರೀಶ ಜೋಗಳೆಕರ ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ