ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರವು 29 ಕಾನೂನುಗಳನ್ನು ಒಟ್ಟುಗೂಡಿಸಿ 4 ಸಂಹಿತೆಗಳನ್ನಾಗಿ ರೂಪಿಸಿರುವುದನ್ನು ವಿರೋಧಿಸಿ ಮೇ 20ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಿದೆ.ಈ ಬಗ್ಗೆ ಸಿಐಟಿಯು ರಾಜ್ಯ ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್, ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಸರ್ಕಾರವು ಈ ಸಂಹಿತೆಗಳ ಮೂಲಕ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಗುಲಾಮರನ್ನಾಗಿಸಲು ಹೊರಟಿದೆ. ಈ ಪರಿಸ್ಥಿತಿಯನ್ನು, ಸಮಸ್ಯೆಗಳನ್ನು ಇದಕ್ಕೆ ಕಾರಣವಾಗಿರುವ ಸರ್ಕಾರದ ನೀತಿಗಳನ್ನು ಜನತೆಯ ಮುಂದಿರಿಸಲು ಮತ್ತು ಈ ಸಮಾಜಕ್ಕೆ ಅನ್ನದಾತ ರೈತರ ಮತ್ತು ಕಾರ್ಮಿಕ ರಂಗದ ಸಮಸ್ಯೆಗಳಿಗೆ ಕಾರಣವಾಗಿರುವಂತಹ ನೀತಿಗಳನ್ನು ಬದಲಿಸುವಂತೆ ಆಗ್ರಹಿಸಿ ಈ ಮುಷ್ಕರಕ್ಕೆ ಕರೆ ನೀಡಿಲಾಗಿದೆ ಎಂದರು. ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಸಮಿತಿ ವತಿಯಿಂದಲೂ ಮುಷ್ಕರವು ಉಡುಪಿ, ಕುಂದಾಪುರ, ಬೈಂದೂರಿನಲ್ಲಿ ನಡೆಯಲಿದೆ. ಬ್ಯಾಂಕ್, ಎಲ್ಐಸಿ, ಅಂಚೆ, ಅಂಗನವಾಡಿ - ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಂಡು, ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಕೊನೆಗೊಳ್ಳಲಿದೆ. ನಂತರ ಸಭೆ ನಡೆಯಲಿದೆ. ಕುಂದಾಪುರದ ಶಾಸ್ತ್ರಿ ವೃತ್ತದಿಂದ ಆರಂಭಗೊಂಡು, ಬಸ್ ನಿಲ್ದಾಣವರೆಗೆ ಸಾಗಿ, ಶಾಸ್ತ್ರಿ ಸರ್ಕಲ್ ಗೆ ವಾಪಾಸಾಗಿ ಸಭೆ ನಡೆಯಲಿದೆ ಎಂದು ತಿಳಿಸಿದರು.ಜಿಲ್ಲಾ ಸಮಿತಿಯ ಪ್ರ.ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಮೇ 17ರಂದು ಉಡುಪಿ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಪಾದಯಾತ್ರೆಯ ಮೂಲಕ ಮುಷ್ಕರಕ್ಕೆ ಬಂಬಲಿಸುವಂತೆ ಸಾರ್ವಜನಿಕರಿಗೆ ಕರಪತ್ರವನ್ನು ಹಂಚಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಕವಿರಾಜ್ ಎಸ್.ಕೋಟ್ಯಾನ್, ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ್ಪ ಬಂಗೇರ ಉಸ್ಥಿತರಿದ್ದರು.