ಕನ್ನಡಪ್ರಭ ವಾರ್ತೆ ಹಾಸನ
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದ ಭಾಗವಾಗಿ ಈ ಮನವಿ ಸಲ್ಲಿಸಲಾಗಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಜೀವನಮಟ್ಟ ಸುಧಾರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ವಿವಿಧ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ನಿಗದಿಪಡಿಸುವ ಬದಲು ಬಹುತೇಕ ಉದ್ದಿಮೆಗಳಿಗೆ ಏಕರೂಪದ ವೇತನ ವ್ಯವಸ್ಥೆ ಜಾರಿಗೊಳಿಸಿರುವುದು ಹಾಗೂ ಹಿಂದಿನ ನಾಲ್ಕು ವಲಯಗಳ ಬದಲಿಗೆ ಮೂರು ವಲಯಗಳ ವ್ಯವಸ್ಥೆ ಅಳವಡಿಸಿರುವುದು ಕಾರ್ಮಿಕರ ಪರವಾದ ಹೆಜ್ಜೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಎಂದರು. ಆದಾಗ್ಯೂ, ಪ್ರಸ್ತುತ ನಿಗದಿಪಡಿಸಿರುವ ವೇತನವು ಕಾರ್ಮಿಕರ ನೈಜ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿಲ್ಲ ಎಂದು ಸಂಘಟನೆ ಹೇಳಿದೆ. ಸುಪ್ರೀಂ ಕೋರ್ಟ್ 1992ರ `ವರ್ಕ್ಮೆನ್ ವರ್ಸಸ್ ರೆಪ್ಟಾಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಕಾರ್ಮಿಕ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಇತರೆ ಮೂಲಭೂತ ಅಗತ್ಯಗಳನ್ನು ಪರಿಗಣಿಸಿ ವೇತನ ನಿಗದಿಪಡಿಸಬೇಕಾಗಿದೆ. ಇದೇ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಆದರೆ ಸರ್ಕಾರದ ಇತ್ತೀಚಿನ ಅಧಿಸೂಚನೆ ಈ ಮಾನದಂಡಗಳಿಗೆ ಸಂಪೂರ್ಣವಾಗಿ ಅನುಗುಣವಾಗಿಲ್ಲ ಎಂದು ಆರೋಪಿಸಿದರು. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ, ದಿನನಿತ್ಯದ ಜೀವನ ವೆಚ್ಚ ಮತ್ತು ಕುಟುಂಬ ನಿರ್ವಹಣೆಯ ವಾಸ್ತವಿಕ ಅಗತ್ಯಗಳನ್ನು ಪರಿಗಣಿಸಿದರೆ ಕನಿಷ್ಠ ವೇತನವು ಸರಾಸರಿ 36 ಸಾವಿರ ರು. ಇರಬೇಕು. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕಾರ್ಮಿಕರಿಗೆ ಪರಿಷ್ಕೃತ ವೇತನದಿಂದ ಪ್ರಯೋಜನವಾಗಲಿದೆಯಾದರೂ, ನೈಜ ಜೀವನ ವೆಚ್ಚಕ್ಕೆ ತಕ್ಕಂತೆ ಮತ್ತಷ್ಟು ಹೆಚ್ಚಳ ಅಗತ್ಯವಿದೆ ಎಂದು ಹೇಳಿದರು.
ಕನಿಷ್ಠ ವೇತನ ಪರಿಷ್ಕರಣೆಯ ಜಾರಿಯ ದಿನಾಂಕದ ಕುರಿತು ಸಿಐಟಿಯು ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ಕರಡು ಅಧಿಸೂಚನೆಯನ್ನು 2025ರ ಏಪ್ರಿಲ್ 11ರಂದು ಪ್ರಕಟಿಸಿದ್ದರೂ, ಅಂತಿಮ ಅಧಿಸೂಚನೆಯನ್ನು 2026ರ ಮೇ 22ರಿಂದ ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರು ಸುಮಾರು ಒಂದು ವರ್ಷದ ಅವಧಿಯ ಬಾಕಿ ವೇತನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಷ್ಕ್ರತ ವೇತನವನ್ನು 2025ರ ಏಪ್ರಿಲ್ 11ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತಂದು ಕಾರ್ಮಿಕರಿಗೆ ದೊರೆಯಬೇಕಾದ ವೇತನ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಲಕ್ಷಾಂತರ ಕಾರ್ಮಿಕರು ಗುತ್ತಿಗೆ, ಹಂಗಾಮಿ, ಔಟ್ ಸೋರ್ಸಿಂಗ್, ನಿಯಮಿತ ಅವಧಿ, ತರಬೇತಿ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಖಾಯಂ ನೌಕರರಿಗೆ ದೊರೆಯುವ ವೇತನ, ಭತ್ಯೆ, ಸಾಮಾಜಿಕ ಭದ್ರತೆ ಹಾಗೂ ಕಾನೂನುಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ. ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದರೂ ಉದ್ಯೋಗ ಭದ್ರತೆ ಇಲ್ಲದ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದುಮನವಿ ಪತ್ರದಲ್ಲಿ ವಿವರಿಸಲಾಗಿದೆ ಎಂದರು.