ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Jul 31, 2025, 12:55 AM ISTUpdated : Jul 31, 2025, 01:03 AM IST
ಪ್ರತಿಭಟನೆ  | Kannada Prabha

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸಿಐಟಿಯು ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರು ವೈಜ್ಞಾನಿಕ ಕನಿಷ್ಠ ವೇತನವೂ ಇಲ್ಲದೆ, ಕಡಿಮೆ ಸಂಬಳಕ್ಕೆ ಒತ್ತಡದ ಹೆಚ್ಚಿನ ಕೆಲಸವನ್ನು ಮಾಡಬೇಕಿದೆ. 2016ರಲ್ಲಿ ಅತ್ಯಲ್ಪ ವೇತನವನ್ನು ಜಾಸ್ತಿ ಮಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ ವೇತನ ಹೆಚ್ಚು ಮಾಡಿಲ್ಲ. ನೌಕರರಿಗೆ ಕುಟುಂಬ ನಿರ್ವಾಹಣೆಗೂ ಸಮಸ್ಯೆ ಎದುರಾಗಿದೆ. ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮೂಲವೇತನ 38, 021 ರು., ನೀರುಗಂಟಿ, ಪಂಪ್ ಅಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಳಿಗೆ 33, 062 ರು,. ಹಾಗು ಜವಾನರಿಗೆ 28, 750 ರು. ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ ಮೂಲವೇತನಕ್ಕೆ ಶೇ.2 ರಷ್ಟು ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಕಾಫಿ ಮತ್ತು ಕಾಳುಮೆಣಸು ತೋಟಗಳಲ್ಲಿ ಹೆಚ್ಚಿನ ಕಾರ್ಮಿಕರು ದುಡಿಯುತ್ತಿದ್ದಾರೆ. ಅಲ್ಲದೇ, ಕಟ್ಟಡ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಹೆಚ್ಚಿದ್ದಾರೆ. ಆದರೆ, ಕಾರ್ಮಿಕ ಕಾನೂನಿನ ಅಡಿಯಲ್ಲಿ ಲಭ್ಯವಾಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಗೆ 5 ತಾಲೂಕುಗಳಿವೆ. ಆದರೆ, ಕಾರ್ಮಿಕ ನಿರೀಕ್ಷರ ಕೊರತೆ ಕಾಡುತ್ತಿದೆ. ಜತೆಗೆ ಕಾರ್ಮಿಕ ನ್ಯಾಯಾಧೀಶ ನೇಮಕವಾಗದೆ ಕಾರ್ಮಿಕರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.ಪತ್ರಿಭಟನಾ ನಿರತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವ್, ಪೊನ್ನಂಪೇಟೆ ತಾಲೂಕು ಸಂಘದ ಉಪಾಧ್ಯಕ್ಷ ದಿಲೀಪ್‌, ಸದಸ್ಯರಾದ ರಂಗಸ್ವಾಮಿ, ವೀರಭದ್ರ, ಸತೀಶ್, ವಾಸು, ಯಶೋದ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸಿಐಟಿಯು ಸದಸ್ಯರು ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌