ತ್ಯಾಜ್ಯದ ಪುನರ್ ಬಳಕೆಗೆ ಮುಂದಾದ ನಗರಸಭೆ

KannadaprabhaNewsNetwork | Published : Mar 15, 2025 1:06 AM

ಸಾರಾಂಶ

ಸಂಗ್ರಹವಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವೆಂದು ಪ್ರತ್ಯೇಕವಾಗಿ ವಿಂಗಡಿಸಿ ಹಸಿ ಕಸವನ್ನು 60 ದಿನಗಳ ಕಾಲ ಒಂದೆಡೆ ಸಂಗ್ರಹಿಸಿ ನಂತರ ಈ ಕಸವನ್ನು ಈಗಾಗಲೇ 70 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಯಂತ್ರೋಪಕರಣಗಳ ಸಹಕಾರದಿಂದ ಸಾವಯವ ಗೊಬ್ಬರವನ್ನು ತಯಾರಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಮಾರುವ ಸಂಕಲ್ಪ ನಗರಸಭೆಯದ್ದಾಗಿದೆ. ನಿತ್ಯ ನಗರದಲ್ಲಿ ಹತ್ತಾರು ಟನ್ ಗಳಷ್ಟು ಸಂಗ್ರಹವಾಗುವ ತ್ಯಾಜ್ಯವನ್ನು ಪುನರ್ ಬಳಕೆ ಮಾಡುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತ್ಯಾಜ್ಯ ವ್ಯಾಜ್ಯಕ್ಕೆ ಕಾರಣವಾಗಬಾರದಾದರೆ ಕಸವನ್ನು ರಸವನ್ನಾಗಿಸುವ ಸೂತ್ರದಿಂದ ಮಾತ್ರ ಸಾಧ್ಯ ಎಂಬ ಮಾದರಿ ಪ್ರಯತ್ನದಿಂದ, ನಿತ್ಯ ನಗರದಲ್ಲಿ ಹತ್ತಾರು ಟನ್ ಗಳಷ್ಟು ಸಂಗ್ರಹವಾಗುವ ತ್ಯಾಜ್ಯವನ್ನು ಪುನರ್ ಬಳಕೆ ಮಾಡುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದಿನದಿಂದ ದಿನಕ್ಕೆ ನಗರ ವಿಸ್ತಾರವಾಗಿ ಬೆಳೆಯುತ್ತಿರುವ ಜೊತೆಗೆ ನಗರದ ಜನಸಂಖ್ಯೆ ಕೂಡ 60000 ಗಡಿ ದಾಟಿದೆ. ಸಹಜವಾಗಿಯೇ ಪ್ರತಿದಿನ ಹತ್ತಾರು ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಹೀಗೆ ಸಂಗ್ರಹವಾಗುವ ತ್ಯಾಜ್ಯವನ್ನು ಏನು ಮಾಡುವುದೆಂಬುದೇ ನಗರಸಭೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಈ ಸಮಸ್ಯೆಗೆ ಒಂದು ಒಳ್ಳೆಯ ಮಾದರಿ ಪರಿಹಾರದ ಹಾದಿಯನ್ನು ಕಂಡುಕೊಂಡಿರುವ ನಗರ ಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ಶ್ಲಾಘನೆ ನೀಡಲೇಬೇಕಾದ ಜನಪರ ಕಾರ್ಯಕ್ಕೆ ಇನ್ನು ನಗರದ ಜನತೆ ಕೈಜೋಡಿಸಬೇಕಿದೆ.

ನಗರದ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೌರ ಕಾರ್ಮಿಕರು ಹಗಲು ಇರುಳು ಎನ್ನದೆ ಶ್ರಮಿಸುತ್ತಿರುವುದಲ್ಲದೆ ಮನೆ ಮನೆಗಳಿಗಷ್ಟೇ ಅಲ್ಲದೆ ಅಂಗಡಿ ಮುಂಗಟ್ಟುಗಳ ಬಳಿ ಬಂದು ಸಂಗ್ರಹಿಸುವ ತ್ಯಾಜ್ಯ ಪ್ರತಿದಿನ 20 ಟನ್ ಮೀರುತ್ತದೆ. ಹೀಗೆ ಸಂಗ್ರಹವಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವೆಂದು ಪ್ರತ್ಯೇಕವಾಗಿ ವಿಂಗಡಿಸಿ ಹಸಿ ಕಸವನ್ನು 60 ದಿನಗಳ ಕಾಲ ಒಂದೆಡೆ ಸಂಗ್ರಹಿಸಿ ನಂತರ ಈ ಕಸವನ್ನು ಈಗಾಗಲೇ 70 ಲಕ್ಷ ವೆಚ್ಚದಲ್ಲಿ ಅಳವಡಿಸಿರುವ ಯಂತ್ರೋಪಕರಣಗಳ ಸಹಕಾರದಿಂದ ಸಾವಯವ ಗೊಬ್ಬರವನ್ನು ತಯಾರಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಮಾರುವ ಸಂಕಲ್ಪ ನಗರಸಭೆಯದ್ದಾಗಿದೆ. ಅಂದುಕೊಂಡಂತೆ ಈ ಎಲ್ಲವೂ ಸುಸೂತ್ರವಾಗಿ ನಡೆಯುತ್ತಾ ಸಾಗಿದರೆ ನಗರಸಭೆಯ ಕಾರ್ಯವೈಖರಿ ಅಕ್ಕಪಕ್ಕದ ತಾಲೂಕುಗಳ ಸ್ಥಳೀಯ ಸಂಸ್ಥೆಗಳ ಆಡಳಿತ ನಡೆಸುವುದು ಮಾತ್ರವಲ್ಲ, ರಾಜ್ಯದಲ್ಲಿ ಗಮನ ಸೆಳೆಯಲಿದೆ ಎಂಬುದು ನಗರ ಸಭೆಯ ಆಡಳಿತದ ವಿಶ್ವಾಸವಾಗಿದೆ.

*ಹೇಳಿಕೆ- 1

ಯಾವುದೇ ವಸ್ತುವಿರಬಹುದು ಆ ವಸ್ತು ಮತ್ತೆ ಮತ್ತೆ ಬಳಕೆಯಾಗುವುದರಿಂದ ಲಾಭ ಹೆಚ್ಚು. ಅದೇ ರೀತಿ ಕಸ ಕೂಡ. ಇದನ್ನು ಅರಿತಿದ್ದ ನಮ್ಮ ಹಿರಿಯರು ಹೇಳುತ್ತಿದ್ದರು ಕಸ ರಸವನ್ನಾಗಿಸಬೇಕೆಂದು ಇಂಥ ಮಹತ್ಕಾರ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯೋನ್ಮುಖವಾಗಿರುವುದು ಮೆಚ್ಚುಗೆ ವಿಷಯ.

- ಯರಗನಾಳ್ ಮಲ್ಲೇಶ್, ನಗರದ ವಾಸಿ

*ಹೇಳಿಕೆ- 2

ಪ್ರಕೃತಿಯ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ನಿತ್ಯ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳು ಸಹ ಒಂದು ಕಾರಣ ಎಂಬುದನ್ನ ಮನುಷ್ಯ ಒಪ್ಪಿಕೊಳ್ಳಲೇ ಬೇಕಿದೆ ಪ್ರಕೃತಿಯ ಸಮತೋಲನ ಕಾದುಕೊಳ್ಳಬೇಕಾದರೆ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗಬೇಕು ಹಾಗೂ ಉತ್ಪತ್ತಿಯಾಗುವ ತ್ಯಾಜ್ಯ ಮರುಬಳಕೆ ಆಗುವಂತೆ ನೋಡಿಕೊಳ್ಳಬೇಕು ಈ ನಿಟ್ಟಿನಲ್ಲಿ ನಮ್ಮ ನಗರಸಭೆ ಗಂಭೀರ ಪ್ರಯತ್ನ ನಡೆಸುತ್ತಿದ್ದು ಸಾರ್ವಜನಿಕರು ಸಹ ನಮಗೆ ಕೈ ಜೋಡಿಸಬೇಕು.

- ಸಮಿವುಲ್ಲಾ, ನಗರಸಭೆ ಅಧ್ಯಕ್ಷ

*ಹೇಳಿಕೆ-3

ಪ್ರತಿದಿನ ನಗರದಲ್ಲಿ 20 ಟನ್ ಗಳಿಗೂ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿದ್ದು ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಈ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ ಪುನರ್ ಬಳಕೆ ಮಾಡುವುದರಿಂದ ತ್ಯಾಜ್ಯದ ಸಮಸ್ಯೆ ನಿರ್ವಹಣೆಯ ಜೊತೆಗೆ ಕೃಷಿ ಭೂಮಿಗೆ ಪಲವತ್ತತೆ ನೀಡುವ ಸಾವಯವ ಗೊಬ್ಬರ ನೀಡುವ ಸಮುದ್ದೇಶದಿಂದ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರ ಸಹಕಾರದೊಂದಿಗೆ ನಗರಸಭೆ ಆಡಳಿತ ಕಾರ್ಯಕ್ರಮವಾಗಿದೆ. - ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ

Share this article