ಕಾರವಾರ: ಇಲ್ಲಿನ ನಗರಸಭೆ ವ್ಯಾಪ್ತಿಯ ೩೧ ವಾರ್ಡ್‌ಗಳಲ್ಲಿ ಮಳೆಗಾಲದ ತಯಾರಿ ಆರಂಭವಾಗಿದ್ದು, ಚರಂಡಿಯನ್ನು ಸ್ವಚ್ಛತೆ ಮಾಡಲಾಗುತ್ತಿದೆ.
ಚರಂಡಿ ತುಂಬಿದ ಘನತ್ಯಾಜ್ಯ: ನಗರದ ಕೆಲವು ಕಡೆ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ತೆರೆದೇ ಇದೆ. ಇಂತಹ ಕಡೆ ತ್ಯಾಜ್ಯಗಳನ್ನು ಎಸೆಯುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಮದ್ಯದ ಬಾಟಲಿ, ಕುರುಕಲು ತಿಂಡಿ- ತಿನಿಸುಗಳ ಕವರ್, ನೀರಿನ ಬಾಟಲಿ ಹೀಗೆ ಬೇರೆ ಬೇರೆ ಘನತ್ಯಾಜ್ಯಗಳು ಚರಂಡಿಯನ್ನು ತುಂಬಿಕೊಳ್ಳುತ್ತಿವೆ. ಪ್ರತಿವರ್ಷ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಗರಸಭೆಯಿಂದ ಚರಂಡಿಯನ್ನು ಸ್ವಚ್ಛತೆ ಮಾಡಲಾಗುತ್ತದೆ. ಪುನಃ ಸಾರ್ವಜನಿಕರು ತ್ಯಾಜ್ಯವನ್ನು ಚರಂಡಿಗೆ ಎಸೆಯುತ್ತಿದ್ದಾರೆ.
ಸ್ವಚ್ಛ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ಪುನಃ ತ್ಯಾಜ್ಯ ಎಸೆಯುತ್ತಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೇ ಮಳೆಯ ನೀರೆಲ್ಲ ರಸ್ತೆ ಮೇಲೆ, ಮನೆಗಳಿಗೆ ಬಂದು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ೨೦೨೩ರ ಡಿಸೆಂಬರ್‌ನಲ್ಲಿ ಚರಂಡಿ ಸ್ವಚ್ಛತೆ ಮಾಡಿಸಿದಾಗ ಬರೋಬ್ಬರಿ ಎಂಟು ಟನ್ ಲಿಕ್ಕರ್ ಬಾಟಲಿ ಸಿಕ್ಕಿದೆ.ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದ್ದು, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಮನೆ ಮನೆಗೆ ಬರುವ ಕಸ ಸಂಗ್ರಹ ವಾಹನಕ್ಕೆ ನೀಡುವ ಮೂಲಕ ನಗರದ ಸ್ವಚ್ಛತೆಗೆ ಸಹಕಾರ ನೀಡಬೇಕಿದೆ.ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಪ್ರಸಕ್ತ ವರ್ಷ ಟೆಂಡರ್ ನೀಡಿ ನಗರಸಭೆಯ ೩೧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛತೆ ಮಾಡಿಸಲಾಗುತ್ತಿದೆ. ಇಬ್ಬರು ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು, ಮಳೆ ಆರಂಭದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಕೆ.ಎಂ. ರವಿಕುಮಾರ ತಿಳಿಸಿದರು.ಸಹಕಾರ ಅಗತ್ಯ: ಚರಂಡಿ, ನಾಲಾ ಸ್ವಚ್ಛತೆ ಮಾಡಿದ ಬಳಿಕವೂ ಕೆಲವರು ಪುನಃ ಅದೇ ಜಾಗದಲ್ಲಿ ಘನತ್ಯಾಜ್ಯವನ್ನು ಎಸೆಯುತ್ತಿರುವುದು ಗಮನಕ್ಕಿದೆ. ಈ ರೀತಿ ಚರಂಡಿ, ರಸ್ತೆ ಅಕ್ಕ- ಪಕ್ಕ ತ್ಯಾಜ್ಯ ಬಿಸಾಡುತ್ತಿದ್ದ ಹಲವರಿಗೆ ದಂಡ ಕೂಡಾ ಹಾಕಲಾಗಿದೆ. ಘನತ್ಯಾಜ್ಯವನ್ನು ಚರಂಡಿಗೆ ಎಸೆಯದೇ ಕಸದ ವಾಹನಕ್ಕೆ ನೀಡುವ ಮೂಲಕ ಜನರು ಕೂಡಾ ನಗರಸಭೆಗೆ ಸಹಕಾರ ನೀಡಬೇಕು ಎಂದು ನಗರಸಭೆ ಕಾರ್ಯನಿರ್ವಾಹಕ ಅಭಿಯಂತರ ಸದಾನಂದ ಸಾಲೆಹಲೆಹಿತ್ತಲ ತಿಳಿಸಿದರು.