ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದದಲ್ಲಿ ಸಂಗ್ರಹವಾಗುತ್ತಿರುವ ಕಸ ರೈತರ ಜಮೀನಿನಲ್ಲಿ ಗೊಬ್ಬರವಾಗುತ್ತಿದೆ. ನಗರದಲ್ಲಿನ ಹಸಿ ಕಸವನ್ನು ಆಯಾ ಕೃಷಿ ಜಮೀನುಗಳಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿ, ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಉಚಿತವಾಗಿ ಪೂರೈಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷ ಎ.ಗಜೇಂದ್ರ ತಿಳಿಸಿದರು.ನಗರದ 28ನೇ ವಾರ್ಡಿನಲ್ಲಿ ನಗರಸಭೆವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಮನೆಗಳಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಬಗ್ಗೆ ವಾರ್ಡ್ ನ ಜನತೆಗೆ ಹಸಿ-ಕಸ ಮತ್ತು ಒಣ-ಕಸವನ್ನು ಮನೆಯ ಹಂತದಲ್ಲಿಯೇ ವಿಂಗಡಿಸಿ ನಗರಸಭೆಯ ತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ನೀಡುವ ಕುರಿತಾಗಿ ಅರಿವು ಮೂಡಿಸಿ ಮಾತನಾಡಿದರು.ಪ್ರತಿದಿನ 30 ಟನ್ ಕಸ ಸಂಗ್ರಹ
ಸುಮಾರು 75 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ 31 ವಾರ್ಡ್‌ಗಳಿದ್ದು ಪ್ರತಿನಿತ್ಯ 25 ರಿಂದ 30 ಟನ್ ಕಸ ಸಂಗ್ರಹವಾಗುತ್ತಿದೆ. ಇದರಲ್ಲಿ ಪ್ರತ್ಯೇಕವಾಗಿ ಹಸಿಕಸ ಸಂಗ್ರಹಿಸಿ, ನೇರವಾಗಿ ಕೃಷಿ ಜಮೀನುಗಳಲ್ಲಿ ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ಉಚಿತವಾಗಿ ನೀಡುವ ಕಾರ್ಯವಾಗುತ್ತಿದೆ. ಈಗಾಗಲೇ ನಗರಕ್ಕೆ ಸಮೀಪದಲ್ಲಿರುವ ಅಣಕನೂರು,ಅಗಲಗುರ್ಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, 225 ರೈತರ ಜಮೀನಿನಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿಸುವ ಕೆಲಸವಾಗುತ್ತಿದೆ ಎಂದರು.ನಗರಸಭೆಯು ಐಐಎಚ್‌ಎಸ್ ಮತ್ತು ಗೊದ್ರೇಜ್ ಪ್ರಾರ್ಪಟಿಸ್ ಸಂಸ್ಥೆಯೊಂದಿಗೆ 3 ವರ್ಷದ ಅವಧಿಗೆ ಒಪ್ಪಂದ ವಾಗಿದ್ದು, ನಗರದಿಂದ 8 ಕಿಲೋ ಮೀಟರ್ ಅಂತರದೊಳಗೆ ಇರುವ ಗ್ರಾಮಗಳಲ್ಲಿನ ಆಯ್ದ ರೈತರ ಜಮೀನುಗಳಿಗೆ ನಿಗದಿತ ಪ್ರಮಾಣದಲ್ಲಿ ಹಸಿ ಕಸವನ್ನು ಪೂರೈಸಲಾಗುತ್ತದೆ ಎಂದು ಹೇಳಿದರು.
ತೊಟ್ಟಿಯಲ್ಲಿ ಕಸ ಸಂಸ್ಕರಣೆಅಲ್ಲಿ 20 ಚದರ ಮೀಟರ್ ಅಳತೆಯ ತೊಟ್ಟಿಯಲ್ಲಿ ಕಸವನ್ನು ಸಂಸ್ಕರಿಸಿ, ಇದಕ್ಕೆ ಜಾನುವಾರುಗಳ ಸಗಣಿ, ಗಂಜಲವನ್ನು ಇಲ್ಲವೇ ಸಂಸ್ಥೆ ವಿತರಿಸುವ ಬಯೋ ಕಲ್ಟರ್ ಸೇರಿಸಿ ಒಂದು ತಿಂಗಳು ಕೊಳೆಯುವಂತೆ ಮಾಡಲಾಗುತ್ತದೆ. ಗೊಬ್ಬರವಾಗಿ ಪರಿವರ್ತನೆಯಾದ ಬಳಿಕ ಆ ಜಾಗದ ರೈತರು ಕೃಷಿ ಜಮೀನಿನಲ್ಲಿ ಬೆಳೆದಿರುವ ಬೆಳೆಗೆ ಬಳಸಿಕೊಳ್ಳುತ್ತಾರೆ. ಈಗಾಗಲೇ 2 ಸಾವಿರ ಟನ್ ಗೂ ಅಧಿಕ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಚವಾರ್ಡಿನ ಸದಸ್ಯಚ ಚಂದ್ರಶೇಖರ್, ನಗರಸಭೆ ಪರಿಸರ ಅಭಿಯಂತರ ಉಮಾ ಶಂಕರ್, ಐಐಎಚ್‌ಎಸ್ ಮತ್ತು ಗೊದ್ರೇಜ್ ಪ್ರಾರ್ಪಟಿಸ್ ಸಂಸ್ಥೆಯ ಸದಸ್ಯರು ಇದ್ದರು.