ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಹಬ್ಬದ ಸಂಭ್ರಮಕ್ಕೆ ಮಾರುಕಟ್ಟೆಗಳಲ್ಲಿ ಹೊಸ ಕಳೆ ಬಂದಿದ್ದು, ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರಗಳಲ್ಲಿ ಜನಸಾಗರವೇ ಹರಿದುಬರುತ್ತಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಹಬ್ಬದ ಸಂಭ್ರಮಕ್ಕೆ ಮಾರುಕಟ್ಟೆಗಳಲ್ಲಿ ಹೊಸ ಕಳೆ ಬಂದಿದ್ದು, ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರಗಳಲ್ಲಿ ಜನಸಾಗರವೇ ಹರಿದುಬರುತ್ತಿದೆ.
ಹಬ್ಬದ ಪೂಜಾ ಸಾಮಗ್ರಿಗಳಿಂದ ಹಿಡಿದು ಚಿನ್ನಾಭರಣ, ಹೊಸ ಬಟ್ಟೆ, ವಾಹನಗಳು ಹಾಗೂ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿದೆ. ಹಬ್ಬದ ಮುನ್ನಾದಿನವಾದ ಶನಿವಾರ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.
ದೀಪಾವಳಿ ಹಿನ್ನೆಲೆಯಲ್ಲಿ ಜನರು ಮನೆಗಳ ಸ್ವಚ್ಛತೆ, ಅಲಂಕಾರ ಹಾಗೂ ಲಕ್ಷ್ಮೀ ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಕಬ್ಬು, ಬಾಳೆದಿಂಡು, ಹೂವು, ಹಣ್ಣು, ಮಣ್ಣಿನ ಹಣತೆ, ಆಕಾಶಬುಟ್ಟಿ ಹಾಗೂ ವಿವಿಧ ಅಲಂಕಾರಿಕ ವಸ್ತುಗಳ ಖರೀದಿ ಭರಾಟೆ ಕಂಡುಬಂತು.
ಚಿನ್ನ–ಬೆಳ್ಳಿ ಖರೀದಿಗೂ ಆಸಕ್ತಿ:
ದೀಪಾವಳಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ವಿಶೇಷ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ದಾಖಲೆಯ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ನ.7ರ ಲಭ್ಯ ಮಾರುಕಟ್ಟೆ ದರದ ಪ್ರಕಾರ ಬೆಳಗಾವಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾ ಸುಮಾರು ₹1,43,570 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,31,600 ಇದೆ. ಬೆಳ್ಳಿ ಬೆಲೆ ಕೆಜಿಗೆ ಸುಮಾರು ₹2,16,900 ಇದೆ. ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಳಿತದ ನಡುವೆಯೂ ಗ್ರಾಹಕರು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ.
ಹೂವು, ಕಬ್ಬು, ಹಣತೆಗೆ ಬೇಡಿಕೆ:
ದೀಪಾವಳಿ ಪೂಜೆಗೆ ಅಗತ್ಯವಿರುವ ಹೂವುಗಳ ಖರೀದಿಯೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಚಂಡು ಹೂವು ಕೆಜಿಗೆ ₹100ರಿಂದ ₹120, ಸೇವಂತಿಗೆ ₹300ರಂತೆ ಮಾರಾಟವಾಗುತ್ತಿದೆ. ಜೋಡಿ ಕಬ್ಬಿಗೆ ₹50 ಇದ್ದರೆ, ಬಾಳೆ ಗೊನೆ ಗಾತ್ರಕ್ಕೆ ಅನುಗುಣವಾಗಿ ₹50ರಿಂದ ₹300ರವರೆಗೆ ಮಾರಾಟವಾಗುತ್ತಿದೆ. ಹೂವಿನ ಮಾಲೆ ₹50ರಿಂದ ₹150, ಆಕಾಶಬುಟ್ಟಿ ₹400ರಿಂದ ₹2,600, ಭತ್ತದ ತೋರಣ ₹500 ಹಾಗೂ ರಂಗೋಲಿ ಸ್ಟ್ರೈಕರ್ ₹50ರಿಂದ ₹150ರವರೆಗೆ ಮಾರಾಟವಾಗುತ್ತಿವೆ. ನಾಲ್ಕು ಮಣ್ಣಿನ ಹಣತೆಗಳಿಗೆ ₹50 ನಿಗದಿಪಡಿಸಲಾಗಿದೆ.
ಮನೆಗಳಲ್ಲಿ ಅಲಂಕಾರಕ್ಕಾಗಿ ಆಕಾಶಬುಟ್ಟಿ, ಮಣ್ಣಿನ ಹಣತೆ, ವಿವಿಧ ಬಣ್ಣಗಳ ದೀಪಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಇಷ್ಟಪಡುವ ಸಿಹಿ ತಿನಿಸುಗಳ ಗಿಫ್ಟ್ ಹ್ಯಾಂಪರ್ಗಳು ₹750ರಿಂದ ₹2,000ರವರೆಗೆ ಮಾರಾಟವಾಗುತ್ತಿವೆ.
ಹಳೇ ಪಿ.ಬಿ. ರಸ್ತೆ, ಕಾಕತಿವೇಸ್ ರಸ್ತೆ, ಖಡೇಬಜಾರ್, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಪಾಂಗುಳ ಗಲ್ಲಿ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿದೆ. ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ವಾಹನಗಳ ಶೋರೂಂಗಳಲ್ಲಿಯೂ ಖರೀದಿ ಉತ್ಸಾಹ ಕಂಡುಬರುತ್ತಿದೆ.
ಉತ್ತರ ಕರ್ನಾಟಕದ ಭಾಗಗಳಲ್ಲಿ ದೀಪಾವಳಿಯಂದು ಆಚರಿಸುವ ಲಕ್ಷ್ಮೀ ಪೂಜೆಗೆ ವಿಶೇಷ ಮಹತ್ವವಿದೆ. ಮನೆಗಳಲ್ಲಿ ಮಾತ್ರವಲ್ಲದೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿ-ಮುಂಗಟ್ಟುಗಳಲ್ಲಿಯೂ ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಹೀಗಾಗಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಚ್ಛಗೊಳಿಸಿ ಸುಣ್ಣ-ಬಣ್ಣ ಬಳಿದು ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳ ಬಳಕೆಗೆ ನಿರ್ಬಂಧವಿದ್ದು, ಹಸಿರು ಪಟಾಕಿಗಳ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೂ ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಚುರುಕಾಗಿದೆ. ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮಣ್ಣಿನ ಹಣತೆಗಳ ಖರೀದಿಗೂ ಜನರು ಆದ್ಯತೆ ನೀಡುತ್ತಿದ್ದಾರೆ.
ಗ್ರಾಹಕರಿಂದ ಹಿಡಿದು ವ್ಯಾಪಾರಸ್ಥರವರೆಗೆ ಹಬ್ಬದ ಸಂಭ್ರಮ:
ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತವಿದ್ದರೂ ಜನರು ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಖರೀದಿಯಲ್ಲಿ ತೊಡಗಿದ್ದಾರೆ.
ಈ ಬಾರಿ ದೀಪಾವಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಖರೀದಿಸಿದ್ದೇವೆ. ಪರಿಸರ ಸ್ನೇಹಿ ಹಬ್ಬ ಆಚರಿಸುವ ಉದ್ದೇಶದಿಂದ ಪಟಾಕಿ ಬದಲು ಮಣ್ಣಿನಿಂದ ತಯಾರಿಸಿದ ಹಣತೆಗಳನ್ನು ಖರೀದಿಸಿದ್ದೇವೆ.
-ಸಂಜನಾ ಪಾಟೀಲ, ಗ್ರಾಹಕಿ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಖರೀದಿ ಭರಾಟೆ ಹೆಚ್ಚಾಗಿದೆ. ಹೂವು, ಅಲಂಕಾರಿಕ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳಿಗೆ ಉತ್ತಮ ಬೇಡಿಕೆ ಬಂದಿದ್ದು, ವ್ಯಾಪಾರದಿಂದ ಉತ್ತಮ ಆದಾಯ ದೊರೆಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.