;Resize=(412,232))
ಬೆಂಗಳೂರು : ನಗರದಲ್ಲಿ ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ರಾತ್ರಿ ಬಿದ್ದ ಮಳೆಗೆ ಆರ್.ಎಂ.ವಿ.ಬಡಾವಣೆಯಲ್ಲಿ ಮರ ಬಿದ್ದು ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ಅಡಚಣೆಯುಂಟಾಗಿತ್ತು. ಮಳೆಯಿಂದಾಗಿ ನಗರದ ಹೂಡಿ, ಆಡುಗೋಡಿ, ಯಶವಂತಪುರ ರೈಲ್ವೆ ಅಂಡರ್ ಪಾಸ್ ಸೇರಿದಂತೆ ಹಲವೆಡೆ ನೀರು ನಿಂತು ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿತ್ತು.
ಬುಧವಾರ ಸಂಜೆಯಿಂದ ನಗರದಾದ್ಯಂತ ತುಂತುರು ಮಳೆಯಾಗಿದ್ದು, ಪೂರ್ವ ಪಾಲಿಕೆ ವ್ಯಾಪ್ತಿಯ ಹೂಡಿ, ಉತ್ತರ ಪಾಲಿಕೆ ವ್ಯಾಪ್ತಿಯ ಜಕ್ಕೂರು, ಕೆಂಪೇಗೌಡ ವಿಮಾನ ನಿಲ್ದಾಣ, ಕೇಂದ್ರ ಪಾಲಿಕೆ ವ್ಯಾಪ್ತಿಯ ಕೋನೇನಅಗ್ರಹಾರ, ಎಚ್ಎಎಲ್ ವಿಮಾನ ನಿಲ್ದಾಣ, ದೇವಸಂದ್ರ, ಎ.ನಾರಾಯಣ ಪುರ, ಕೊಡಿಗೇಹಳ್ಳಿ, ದೊಡ್ಡಬಿದರಕಲ್ಲು, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಆಡುಗೋಡಿ ಸೇರಿದಂತೆ ಉತ್ತರ, ಕೇಂದ್ರ ಪಾಲಿಕೆ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಯೋಗೀಶ್ವರ್ ನಗರ, ಹೆಬ್ಬಾಳ ರಿಂಗ್ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ರೇವಾ ಎಂಜಿನಿಯರಿಂಗ್ ಕಾಲೇಜು, ಹೊಸೂರು ಬಂಡೆ ರಸ್ತೆ, ಕಣ್ಣೂರು, ಯಶವಂತಪುರದ ಜೆ.ಪಿಪಾರ್ಕ್ ರೈಲ್ವೆ ಅಂಡರ್ ಪಾಸ್, ತುಮಕೂರು ರಸ್ತೆಯ ಸ್ಪರ್ಷ ಆಸ್ಪತ್ರೆ ಸಮೀಪ ರಸ್ತೆಗಳಲ್ಲಿ ಭಾರಿ ಪ್ರಮಾಣದ ನೀರು ನಿಂತು ವಾಹನಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಮಳೆ ನಿಂತ ನಂತರ ಪಾಲಿಕೆ ಸಿಬ್ಬಂದಿ ಅಲ್ಲಲ್ಲಿ ಒಳಚರಂಡಿ ಹಾಗೂ ಮಳೆ ನೀರು ಕಾಲುವೆಗಳಲ್ಲಿ ಸಿಲುಕಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿದ್ದರಿಂದ ನೀರು ಸರಾಗವಾಗಿ ಹರಿದು ವಾಹನ ಸಂಚಾರಕ್ಕೆ ಸುಗಮವಾಯಿತು.
ಮುಂದಿನ ಎರಡು ಮೂರು ದಿನ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅನಾಹುತಗಳು ಜರುಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಎಂದು ಎಲ್ಲಾ ಅಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.ಐದೂ ಪಾಲಿಕೆ ಆಯುಕ್ತರು ಮುಖ್ಯ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಬುಧವಾರ ಸಂಜೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಹಾಗೂ ಕೇಂದ್ರ ವಲಯದಲ್ಲಿ ಮುಂದಿನ ಎರಡು ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಮಳೆಯಿಂದ ಯಾವುದೇ ಅನಾಹುತ ಜರುಗುವ ಮುನ್ನ ಎಚ್ಚರಿಕೆ ವಹಿಸಬೇಕು, ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು. ಪಶ್ಚಿಮ ಮತ್ತು ಉತ್ತರ ಬೆಂಗಳೂರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಹರಿ ವಾಹನ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಳೆ ಸಂದರ್ಭ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಜಾಗೃತವಾಗಿರಬೇಕು. ಮಳೆಯಿಂದ ಹೆಚ್ಚು ನೀರು ನಿಲ್ಲಬಹುದಾದ ಪ್ರದೇಶಗಳಲ್ಲಿ ನೀರನ್ನು ಹೊರಗೆ ಹರಿಸುವ ಪಂಪಿಂಗ್ ವ್ಯವಸ್ಥೆಗೆ ಮೋಟರ್ ಸಿದ್ದವಾಗಿರಬೇಕು ಯಾವುದೇ ಪರಿಸ್ಥಿತಿಯನ್ನು ನಿಬಾಯಿಸಲು ಜಿಬಿಎ ವ್ಯಾಪ್ತಿಯ ಎಂಜಿನಿಯರ್ ಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸರ್ವ ಸನ್ನದ್ಧರಾಗಿರಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್ ರಮೇಶ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಿ ಜಗದೀಶ್, ಡಾ. ರಾಜೇಂದ್ರ ಕೆ.ವಿ.ಉಪಸ್ಥಿತರಿದ್ದರು.