ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರ ಸ್ವಚ್ಛತೆ ಜತೆಗೆ ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಮನವಿ ಮಾಡಿದರು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ಆರೋಗ್ಯ ತಪಾಸಣೆ, ಆರೋಗ್ಯ ಮಾಹಿತಿ ಶಿಕ್ಷಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸ್ವಚ್ಛ ಸ್ವಭಾವ, ಸ್ವಚ್ಛ ಸಂಸ್ಕಾರ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ವರ್ಗಗಳಲ್ಲಿ ಪೌರ ಕಾರ್ಮಿಕರು ಮೊದಲಿಗರು. ಕಸ ಕಡ್ಡಿ ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ, ಗಲೀಜುಗಳನ್ನು ಮುಟ್ಟುವ ಸಂದರ್ಭಗಳಲ್ಲಿ ಕಸ ವಿಲೇವಾರಿ ಮಾಡುವಾಗ ಇಲಾಖೆ ಒದಗಿಸಿದ ಗ್ಲೌಸ್, ಬೂಟು, ಮಾಸ್ಕ್ ಇತರೆ ರಕ್ಷಣಾ ಪರಿಕರಗಳನ್ನು ತಪ್ಪದೇ ಉಪಯೋಗಿಸಬೇಕು. ಇಲ್ಲವಾದಲ್ಲಿ ಬೇಗನೇ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಎಲ್ಲಾ ಕಾರ್ಮಿಕರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಬೇಕು. ₹5 ಲಕ್ಷದವರೆಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಸಮಸ್ಯೆಗಳಿಗೆ ಸಹಕಾರಿಯಾಗಲಿದೆ ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯು 1 ವರ್ಷದಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಹುಟ್ಟಿನ ನ್ಯೂನ್ಯತೆ, ಕುಂಠಿತ ಬೆಳವಣಿಗೆ ಸೇರಿದಂತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ತಪಾಸಣೆಗೆ ಸಹಕಾರಿಯಾಗಿದೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರಿ. ಶುದ್ಧವಾದ ನೀರು, ಶುದ್ಧವಾದ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಅವರು ಕೈ ತೊಳೆದುಕೊಳ್ಳುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು. ಬಿ. ಜಾನಕಿ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಮಾತನಾಡಿ, ಪ್ರತಿ ಎರಡು ತಿಂಗಳಿಗೆ ಒಮ್ಮೆಯಾದರೂ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಎಂದು ಆರೋಗ್ಯ ಇಲಾಖೆಗೆ ಮನವಿ ಮಾಡಿದರು.ಡಾ. ಬಿಲಾಲ್, ಡಾ. ವಾಣಿ, ಸಂಚಾರಿ ಆರೋಗ್ಯ ಘಟಕದ ತ್ರಿವೇಣಿ, ಲಕ್ಷ್ಮಿ ದೇವಿ, ರೆಹಮಾನ್, ಶಂಕರಮೂರ್ತಿ, ನಗರಸಭೆ ವ್ಯವಸ್ಥಾಪಕಿ ಮಂಜುಳಾ, ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ್, ಬಾಬುರೆಡ್ಡಿ, ಭಾರತಿ, ರುಕ್ಮಿಣಿ, ಪರಿಸರ ಎಂಜಿನಿಯರ್ ಜಾಫರ್ ಹಾಗೂ 98 ಜನ ಸಫಾಯಿ ಕರ್ಮಚಾರಿಗಳು ಇದ್ದರು.