ನೆಲಮಂಗಲ/ದಾಬಸ್‍ಪೇಟೆ: ಸಾರ್ವಜನಿಕ ಸ್ವಚ್ಛತಾ ಕಾರ್ಯದ ವೇಳೆ ಪೌರಕಾರ್ಮಿಕರು ಮತ್ತು ಮಹಿಳೆಯೊಬ್ಬರ ನಡುವೆ ಕಸದ ತೆರವು ವಿಚಾರವಾಗಿ ಗಲಾಟೆ ನಡೆದ ಘಟನೆ ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.
ನೆಲಮಂಗಲ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 14ರ ಪುಟ್ಟಮ್ಮ ಎಂಬುವರು ಪೌರಕಾರ್ಮಿಕ ಅಶೋಕ್ ಕುಮಾರ್ ಅವರೊಂದಿಗೆ ಕಸ ತೆರವು ವಿಚಾರವಾಗಿ ಗಲಾಟೆ ನಡೆಸಿದ್ದಾರೆ. ಪೌರಕಾರ್ಮಿಕರು ರಾಜಕಾಲುವೆ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮಹಿಳೆ ತಮ್ಮ ಮನೆಯ ಮುಂದಿರುವ ಕಸವನ್ನು ಮೊದಲು ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮಹಿಳೆ ಮತ್ತು ಪೌರಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಹಿಳೆ ಪೌರಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಅಸಮಾಧಾನಗೊಂಡ ಪೌರಕಾರ್ಮಿಕರು ಮಹಿಳೆಯ ಮನೆಯ ಮುಂದೆ ಕಸ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಸಾರ್ವಜನಿಕ ಪ್ರದೇಶಗಳಲ್ಲಿ ಕಸ ತೆರವುಗೊಳಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಪೌರಕಾರ್ಮಿಕರ ದೈನಂದಿನ ಕೆಲಸದ ಭಾಗವಾಗಿದೆ. ಆದರೆ, ತಮ್ಮ ಮನೆಯ ಮುಂದೆ ಇರುವ ಕಸವನ್ನು ಮೊದಲು ತೆರವುಗೊಳಿಸಬೇಕೆಂಬ ವಿಚಾರದಿಂದ ಆರಂಭವಾದ ಗಲಾಟೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ.