ಪೌರ ಕಾರ್ಮಿಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು : ಸುಜಾತಾ

KannadaprabhaNewsNetwork | Published : Nov 28, 2024 12:33 AM

ಸಾರಾಂಶ

ಚಿಕ್ಕಮಗಳೂರು, ಪೌರ ಕಾರ್ಮಿಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಸದೃಢ ಹಲ್ಲುಗಳ ಸಂರಕ್ಷಣೆ ಮಾಡಿಕೊಳ್ಳಬೇಕೆಂದು ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ಪೌರ ಕಾರ್ಮಿಕರಿಗೆ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ನ.27

ಪೌರ ಕಾರ್ಮಿಕರು ಮಾದಕ ವಸ್ತುಗಳ ಸೇವನೆಯಿಂದ ದೂರ ಇರುವುದರ ಜೊತೆಗೆ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಸದೃಢ ಹಲ್ಲುಗಳ ಸಂರಕ್ಷಣೆ ಮಾಡಿಕೊಳ್ಳಬೇಕೆಂದು ನಗರಸಭಾಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ನಗರಸಭಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ, ನಗರಸಭೆ ಸಂಯುಕ್ತಾಶ್ರಯದಲ್ಲಿ ಪೌರ ಕಾರ್ಮಿಕರಿಗೆ ಬುಧವಾರ ಏರ್ಪಡಿದ್ದ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಹಲ್ಲುಗಳ ಸ್ವಚ್ಛತೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಈ ಶಿಬಿರದಲ್ಲಿ ವೈದ್ಯರು ನೀಡುವ ಸಲಹೆಯನ್ನು ಪೌರ ಕಾರ್ಮಿಕರು ಪಾಲಿಸಬೇಕು ಎಂದ ಅವರು, ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಪೂರ್ವಜರು ಹಲ್ಲುಗಳು ಸೇರಿದಂತೆ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಇಂದು ಆಧುನಿಕತೆ ಭರಾಟೆಯಲ್ಲಿ ಕೆಮಿಕಲ್ ಬಳಸಿ ತಯಾರಾಗುವ ಟೂತ್‌ಪೇಸ್ಟ್‌ಗಳಿಂದ ಆರೋಗ್ಯ ಕುಂಠಿತವಾಗುತ್ತಿದೆ ಎಂದು ವಿಷಾಧಿಸಿದರು.ವೈದ್ಯರು ನೀಡುವ ಸಲಹೆಯಂತೆ ಉತ್ತಮ ಗುಣಮಟ್ಟದ ಟೂತ್‌ಪೇಸ್ಟ್ ಬಳಸಿ ದಂತ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಮುಖದ ಸೌಂದರ್ಯ ಹೆಚ್ಚಾಗಲಿದೆ. ಹಾಗಾಗಿ ಮಾದಕ ವಸ್ತುಗಳ ಸೇವನೆ ನಿಷೇಧಿಸುವಂತೆ ಮನವಿ ಮಾಡಿದರು.ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯಕ್ಕೆ ಪೂರಕವಾದ ಹಲವು ಬಗೆಯ ಆರೋಗ್ಯ ಶಿಬಿರಗಳನ್ನು ನಗರಸಭೆಯಿಂದ ಏರ್ಪಡಿಸಿ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ಕೆಲವರು ವಿಫಲರಾಗುತ್ತಿದ್ದಾರೆ. ಈ ರೀತಿ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪೌರ ಕಾರ್ಮಿಕರು, ಸಾರ್ವಜನಿಕರು ಹೆಚ್ಚು ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಜೊತೆಗೆ ಬಾಯಿ, ಹಲ್ಲುಗಳ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದರೆ ಬರುವ ತೊಂದರೆಗಳ ಬಗ್ಗೆ ಮುನ್ನಚ್ಚರಿಕೆ ಕ್ರಮ ವಹಿಸಬೇಕೆಂದು ಹೇಳಿದರು.ಹಾನಿಕಾರಕ ಶೇ. 65 ರಷ್ಟು ಕೆಮಿಕಲ್ ಬಳಸಿ ಗುಟುಕ, ಪಾನ್‌ಪರಕ್ ತಯಾರಿಸಿದ್ದು, ಎಲೆ ಅಡಕೆ, ಬೀಡಿ ಸಿಗರೇಟ್ ಸೇವನೆಯಿಂದ ಮಾರಕ ಕ್ಯಾನ್ಸರ್ ಕಾಯಿಲೆ ಬರುತ್ತಿದ್ದು, ಈ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ಹರಡುವುದನ್ನು ತಡೆಗಟ್ಟಬಹುದು ಎಂದರು.ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಉಪಾಧ್ಯಕ್ಷ ಡಾ. ಪ್ರೇಮಕುಮಾರ್ ಮಾತನಾಡಿ, ದೇಹದಲ್ಲಿ ಪ್ರಮುಖ ಅಂಗ ಬಾಯಿ ಯನ್ನು ಸ್ವಚ್ಛವಾಗಿಡುವ ಮೂಲಕ ತಮ್ಮ ದೇಹದ ಆರೋಗ್ಯ ಕಾಪಾಡಿಕೊಂಡು ಸದೃಢರಾಗಿರಿ ಎಂದು ಹೇಳಿದರು.

ಪ್ರತೀ ದಿನ ಸ್ನಾನ ಮಾಡಿದರೆ ದೇಹದ ಸ್ವಚ್ಛತೆ ಆಗುತ್ತದೆ. ಅದೇ ರೀತಿ ದಿನಕ್ಕೆ 2 ಬಾರಿ ಹಲ್ಲುಗಳನ್ನು ಬ್ರಶ್ ಮಾಡಿ ನಾಲಿಗೆ ಸ್ವಚ್ಛಗೊಳಿಸುವುದರಿಂದ ದಂತ ಹಾಗೂ ಹಲ್ಲುಗಳು ಹುಳುಕು ಆಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.ನಾವು ಸೇವಿಸುವ ಆಹಾರದ ಕ್ಯಾಲ್ಸಿಯಂ ಅಂಶಗಳು ಹಲ್ಲುಗಳ ಸಂದಿನಲ್ಲಿ ಶೇಖರಣೆಯಾಗಿ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದರೆ ಹಲ್ಲು ಸ್ವಚ್ಛವಾಗಿ, ವಸಡು ಗಟ್ಟಿಯಾಗಿ ರಕ್ಷಣೆ ಒದಗಿಸುತ್ತದೆ ಎಂದು ಸಲಹೆ ನೀಡಿದರು.ಹಲ್ಲುಗಳ ರೂಟ್‌ಕೆನಲ್, ಇ-ಪ್ಲಾಂಟ್ ಮುಂತಾದ ಸಮಸ್ಯೆ ಬಗ್ಗೆ ದಂತ ವೈದ್ಯರನ್ನು ಭೇಟಿ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುವಂತೆ ವಿನಂತಿಸಿದ ಅವರು, ಆರೋಗ್ಯ ತಪಾಸಣೆ ಮಾದರಿಯಲ್ಲಿಯೇ ಹಲ್ಲುಗಳ ತಪಾಸಣೆ ಸಹ ಮುಖ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷೆ ಅನು ಮಧುಕರ್, ಡಾ. ಪ್ರವೀಣ್, ಡಾ. ಶ್ರದ್ಧಾ, ಡಾ. ಸಂಜನಾ ಇದ್ದರು.

27 ಕೆಸಿಕೆಎಂ 1ಚಿಕ್ಕಮಗಳೂರಿನ ನಗರಸಭೆಯಲ್ಲಿ ಬುಧವಾರ ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಉಚಿತ ದಂತ ಚಿಕಿತ್ಸಾ ತಪಾಸಣಾ ಶಿಬಿರವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಉದ್ಘಾಟಿಸಿದರು. ಉಪಾಧ್ಯಕ್ಷೆ ಅನು ಮಧುಕರ್‌, ಪೌರಾಯುಕ್ತ ಬಸವರಾಜ್‌ ಇದ್ದರು.

Share this article