ಕನ್ನಡಪ್ರಭ ವಾರ್ತೆ ಬೀರೂರು
ಸಂಘದ ಅಧ್ಯಕ್ಷೆ ಹೆಚ್.ಜಯಮ್ಮ ಮಾತನಾಡಿ, ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಕೆಜಿಐಡಿ, ಜಿವಿ¬ಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುತ್ತಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆಯಲ್ಲಿರುವ ಪೌರ ಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಜೊತೆಗೆ ಆರೋಗ್ಯ ವಿಮೆ, ಕೆಜಿಐಡಿ ಸೌಲಭ್ಯಗಳನ್ನು ಕಳೆದ ೩೦ ವರ್ಷಗಳಿಂದ ವಾಟರ್ ಮ್ಯಾನ್ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನೇರ ಪಾವತಿ ಅಡಿಗೆ ತರಬೇಕೆಂದು ಒತ್ತಾಯಿಸಿದರು.ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನ ಕೈಗೊಂಡು ಭರವಸೆ ನೀಡಿದರೆ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರವನ್ನು ತೀವ್ರತರದಲ್ಲಿ ಮುಂದುವರೆಸುತ್ತೇವೆಂದು ಎಚ್ಚರಿಕೆ ನೀಡಿದರು.
ನಂತರ ಪುರಸಭೆ ಅಧ್ಯಕ್ಷೆ ವನಿತಾ ಮಧು ಮತ್ತು ಶಾಸಕ ಕೆ.ಎಸ್.ಆನಂದ್ ಕಚೇರಿಗೆ ತೆರೆಳಿ ಶಾಸಕರಿಗೆ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರುಗಳು ಸಹ ಮುಷ್ಕರದ ಹೋರಾಟಕ್ಕೆ ಬೆಂಬಲ ಸೂಚಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಸ್.ಆನಂದ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಷ್ಕರ ನಡೆಸಿ ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿಮ್ಮ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮುಷ್ಕರದಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಸಿ.ಸುಬ್ರಮಣಿ, ಮೊಹಮ್ಮದ್ ನೂರುದ್ದೀನ್, ಉಪಾಧ್ಯಕ್ಷ ಎಸ್.ಮಲ್ಲೇಶ್, ಕಾರ್ಯದರ್ಶಿ ಚೆಲುವರಾಜ್, ಖಜಾಂಚಿ ಡಿ.ಎನ್.ದಿನೇಶ್, ವೈ.ಎಂ.ಲಕ್ಷ್ಮಣ್, ಸಿ.ಜಿ.ದೀಪಕ್, ಟಿ.ಸಿ.ಗಿರಿರಾಜು ಕೆ.ಎನ್.ಶಿಲ್ಪ, ಹೆಚ್.ಸಿ.ಪ್ರದೀಪ್, ರೇಣುಕಮ್ಮ, ಕರಿಯಪ್ಪ, ಲೋಕೇಶಪ್ಪ, ಸಾಧಿಕ್, ಧನಂಜಯ್, ರಮೇಶ್, ಶೃಂಗಾರ್ ಕುಪ್ಪುಸ್ವಾಮಿ, ಪಾರ್ವತಿ ಮತ್ತಿತರ ಪೌರ ಸೇವಾ ನೌಕರರು ಇದ್ದರು.