ಬೀದಿ ನಾಯಿಗಳ ದಾಳಿಗೆ 5ನೇ ತರಗತಿ ವಿದ್ಯಾರ್ಥಿ ಬಲಿ

KannadaprabhaNewsNetwork |  
Published : Oct 17, 2024, 12:50 AM IST
ಚಿತ್ರ ಶೀರ್ಷಿಕೆ16ಎಂ ಎಲ್ ಕೆ3ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಾಯಿ ದಾಳಿಗೆ ಮೃತ ಪಟ್ಟ ಬಾಲಕ ಮಿಥುನ್ ಭಾವಚಿತ್ರ.ಚಿತ್ರ ಶೀರ್ಷಿಕೆ16ಎಂ ಎಲ್ ಕೆ4ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಾಯಿ ದಾಳಿಗೆ ಮೃತ ಪಟ್ಟ ಬಾಲಕ ಮಿಥುನ್ . | Kannada Prabha

ಸಾರಾಂಶ

ಮೊಳಕಾಲ್ಮುರು: ಬೀದಿ ನಾಯಿಗಳ ಹಿಂಡೊಂದು ಬಾಲಕನೊಬ್ಬನನ್ನು ಬಲಿ ಪಡೆದ ಹೃದಯ ವಿದ್ರಾವಕ ಘಟನೆ ತಾಲೂಕಿನ ರಾಂಪುರ ಗ್ರಾಮದ ಕೊಂಡಾಪುರ ರಸ್ತೆಯಲ್ಲಿ ಬುಧವಾರ ನಡೆದಿದೆ.

ಮೊಳಕಾಲ್ಮುರು: ಬೀದಿ ನಾಯಿಗಳ ಹಿಂಡೊಂದು ಬಾಲಕನೊಬ್ಬನನ್ನು ಬಲಿ ಪಡೆದ ಹೃದಯ ವಿದ್ರಾವಕ ಘಟನೆ ತಾಲೂಕಿನ ರಾಂಪುರ ಗ್ರಾಮದ ಕೊಂಡಾಪುರ ರಸ್ತೆಯಲ್ಲಿ ಬುಧವಾರ ನಡೆದಿದೆ.

ಮೃತ ಬಾಲಕನನ್ನು ರಾಂಪುರ ಗ್ರಾಮದ ಸಿ.ಮಿಥುನ್ (11) ಎನ್ನಲಾಗಿದೆ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಿಥುನ್ ಎಂದಿನಂತೆ ಟ್ಯೂಶನ್ ಗೆ ತೆರಳಿ ಮರಳಿ ಬರುವಾಗ ದಾರಿಯಲ್ಲಿ ನಿಂತಿದ್ದ ಮೂರ್ನಾಲ್ಕು ಬೀದಿ ನಾಯಿಗಳು ಏಕಾ ಏಕಿ ದಾಳಿ ಮಾಡಿವೆ.

ಈ ವೇಳೆ ಬಾಲಕ ಕಿರುಚಾಡಿದರೂ ಬಿಡದೆ ತಲೆ, ಎದೆ ಭಾಗ, ಕೈ, ಕಾಲು ಸೇರಿದಂತೆ ವಿವಿಧ ಕಡೆ ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿವೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿಯ ವಿಮ್ಸ್ ಗೆ ಕರೆತಂದಾಗ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ರಾಂಪುರ ಗ್ರಾಮದ ಕೊಂಡಾಪುರ ರಸ್ತೆ ಸದಾ ಜನನೀ ಬಿಡ ಪ್ರದೇಶವಾಗಿದೆ. ಕೊಂಡಾಪುರ, ತಿಮ್ಲಾಪುರ, ಕರಡಿಹಳ್ಳಿ ಸೇರಿದಂತೆ ಆಂಧ್ರ ಗಡಿ ಭಾಗದ ವಿವಿಧ ಭಾಗಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ವಾಹನ ಸಂಚಾರ ಸದಾ ಹೆಚ್ಚಾಗಿರುತ್ತದೆ. ಆದರೆ ಬುಧವಾರ ಜಿಟಿ ಜಿಟಿ ಮಳೆ ಇದ್ದರಿಂದ ಜನರ ಓಡಾಟ ಇರಲಿಲ್ಲ. ಇದೇ ಸಮಯ ರಸ್ತೆಯಲ್ಲಿ ಸಾಗಿ ಬರುತ್ತಿದ್ದ ಬಾಲಕ ಮಿಥುನ್ ಮೇಲೆ ನಾಯಿಗಳು ದಾಳಿ ಮಾಡುತ್ತಿದ್ದರೂ ಆ ಕ್ಷಣಕ್ಕೆ ಸ್ಥಳದಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಮಕ್ಕಳನ್ನು ಹೊರಗೆ ಕಳಿಸಲು ಸಾರ್ವಜನಿಕರಿಗೆ ಭೀತಿ ಎದುರಾಗಿದೆ.

ಮಡುಗಟ್ಟಿದ ದುಃಖ: ಕಣ್ಣ ಮುಂದೆಯೇ ಆಡಿಕೊಂಡು ಖುಶಿ ಖುಶಿಯಾಗಿ ಕಲಿಯಲು ಹೋಗಿದ್ದ ಬಾಲಕ ನಾಯಿಗಳ ದಾಳಿಗೆ ತುತ್ತಾಗಿದ್ದರಿಂದ ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ಮಲಗಿತ್ತು. ಗ್ರಾಮದ ಬೀದಿಗಳಲ್ಲಿ ನೀರವ ಮೌನ ಆವರಿಸಿತ್ತು. ಮಗನ ಸಾವಿನಿಂದ ಪೋಷಕರ ದುಃಖ ಮುಗಿಲು ಮುಟ್ಟಿತ್ತು. ಬಾಳಿ ಬದುಕಬೇಕಾದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ದುಃಖದ ಕಟ್ಟೆ ಒಡೆದಿತ್ತು.

ಗ್ರಾಮ ಪಂಚಾಯಿತಿ ಬೇಜವಾಬ್ದಾರಿ: ಗ್ರಾಮದಲ್ಲಿ ಬೀದಿ ನಾಯಿಗಳು ಕಾಟ ಹೆಚ್ಚುತ್ತಿವೆ. ಹಲವು ಬಾರಿ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆಗಳು ಜರುಗಿದ್ದು, ಕಳೆದೆರಡು ವರ್ಷಗಳಿಂದ ನಾಲ್ಕೈದು ಇಂಥಹ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೆ ಕಳೆದ ತಿಂಗಳು ಎರಡು ಕೋತಿಗಳು ಇಬ್ಬರು ಬಾಲಕರನ್ನು ಕಚ್ಚಿ ಗಾಯಗೊಳಿಸಿವೆ. ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದ್ದರೂ, ಸಮಸ್ಯೆ ಪರಿಹಾರವಾಗಿಲ್ಲ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬಂದವು.

ರಾಂಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಂಪುರ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿವೆ. ನಾಯಿಗಳ ಕಾಟಕ್ಕೆ ಹೆದರಿ ಮಕ್ಕಳು, ವಯೋ ವೃದ್ಧರು ಮನೆಯಿಂದ ಹೊರಗೆ ಬರಲು ಭಯ ಪಡುವಂತಾಗಿದೆ. ನಾಯಿ ದಾಳಿಗೆ ಬಾಲಕ ಸಾವಿಗೀಡಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು.

- ತಿಪ್ಪೇಶ್, ಗ್ರಾಮ ಪಂಚಾಯಿತಿ ಸದಸ್ಯ.ರಾಂಪುರ

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ