ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿ
ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆ ಬರುತ್ತಿರುವುದರಿಂದ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಈ ಸಲ ದಸರಾ ರಜೆಯಲ್ಲೂ ವಿಶೇಷ ತರಗತಿ ನಡೆಸುವ ಮೂಲಕ ಫಲಿತಾಂಶ ಸುಧಾರಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ, ಇದಕ್ಕೆ ಶಿಕ್ಷಕರು ಅಪಸ್ವರ ಎತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ದಸರಾ ರಜೆಯಲ್ಲಿ ವಿಷಯಾಧಾರಿತ ವಿಶೇಷ ತರಗತಿ ನಡೆಸಲು ಆದೇಶಿಸಲಾಗಿದೆ. ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ಸಲುವಾಗಿ ಅ.೩ರಿಂದ ಅ.೨೦ರವರೆಗೆ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ದಸರಾ ರಜಾ ಅವಧಿಯಲ್ಲಿ ಪ್ರೌಢಶಾಲಾ ವಿಷಯ ಶಿಕ್ಷಕರು ನಿಗದಿಪಡಿಸಿದ ಅವಧಿಯಲ್ಲಿ ಪಠ್ಯ ಮುಗಿಸುವುದಕ್ಕೆ ಪೂರಕವಾಗಿ ವಿಶೇಷ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆವರೆಗೆ ತರಗತಿ ನಡೆಸಲು ಸೂಚಿಸಲಾಗಿದೆ.
೧೪ ದಿನ ವಿಶೇಷ ತರಗತಿ:ರಜಾ ಅವಧಿಯಲ್ಲಿ ನಡೆಸುವ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಕೂಡ ನೀಡಲಾಗಿದೆ. ಅ.೩ ಮತ್ತು ಅ. ೪ರಂದು ಕನ್ನಡ, ಅ. ೫ ಮತ್ತು ಅ.೭ರಂದು ವಿಜ್ಞಾನ, ಅ.೮ ಮತ್ತು ೯ರಂದು ಇಂಗ್ಲಿಷ್, ಅ.೧೦ ಮತ್ತು ೧೪ರಂದು ಸಮಾಜ ವಿಜ್ಞಾನ, ಅ.೧೫ ಮತ್ತು ೧೬ರಂದು ಗಣಿತ, ಅ.೧೮ ಮತ್ತು ೧೯ರಂದು ಹಿಂದಿ ತರಗತಿ ನಡೆಸುವಂತೆ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿರುವ ಜ್ಞಾಪನದಲ್ಲಿ ಸೂಚಿಸಲಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. ೭೮.೩೪ರಷ್ಟು ಬಂದಿದೆ. ರಾಜ್ಯಮಟ್ಟದಲ್ಲಿ ೧೫ನೇ ಸ್ಥಾನದಲ್ಲಿರುವ ಜಿಲ್ಲೆಯ ಫಲಿತಾಂಶ ಈ ವರ್ಷ ಹೆಚ್ಚಿಸುವ ನಿಟ್ಟಿನಲ್ಲಿ ಈಗಿನಿಂದಲೇ ಕ್ರಮ ಕೈಗೊಳ್ಳಲಾಗಿದೆ.ದಿಟ್ಟ ಕ್ರಮ ಅಗತ್ಯ:ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಹಾಗೂ ಈ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿರುವ ಜಿಲ್ಲಾ ಪಂಚಾಯ್ತಿ ಸಿಇಒ ಅಕ್ಷಯ ಶ್ರೀಧರ್ ಅವರು ರಜಾ ದಿನಗಳಲ್ಲಿ ತರಗತಿ ನಡೆಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. ಪ್ರತಿ ವರ್ಷ ಫಲಿತಾಂಶ ಬಂದಾಗ ಮಾತ್ರ ಸುಧಾರಣೆ ಬಗ್ಗೆ ಮಾತನಾಡಿ ನಂತರ ಯಾವುದೇ ಪೂರಕ ಕ್ರಮ ಅನುಷ್ಠಾನಗೊಳಿಸುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬಂದಾಗ ಆಗುವ ಒತ್ತಡ ತಪ್ಪಿಸುವ ಸಲುವಾಗಿ ಈ ಸಲ ಮುಂಚಿತವಾಗಿಯೇ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದನ್ನು ಮಕ್ಕಳ ಪೋಷಕರು ಸ್ವಾಗತಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಕೂಡ ವಿಶೇಷ ತರಗತಿಗಳಿಗೆ ಹೋಗಲು ಆಸಕ್ತಿ ತೋರುತ್ತಿದ್ದಾರೆ.
ಶಿಕ್ಷಕರ ಅಪಸ್ವರ: ರಜೆಯಲ್ಲಿ ವಿಶೇಷ ತರಗತಿ ನಡೆಸುವಂತೆ ಹೊರಡಿಸಿರುವ ಆದೇಶಕ್ಕೆ ಹೈಸ್ಕೂಲ್ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು ಮಾಡುತ್ತಿದ್ದೇವೆ. ರಜೆ ಮುಗಿದ ಮೇಲೆ ಕೂಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಹೆಚ್ಚಿನ ಶ್ರಮ ಹಾಕಲು ಸಿದ್ಧರಿದ್ದೇವೆ. ಆದರೆ, ರಜಾ ದಿನಗಳಲ್ಲಿ ವೇಳಾಪಟ್ಟಿ ಕೊಟ್ಟು ತರಗತಿ ನಡೆಸುವಂತೆ ಆದೇಶ ಮಾಡಿರುವುದು ಸರಿಯಲ್ಲ ಎಂದು ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಅಧಿಕಾರಿಗಳಿಗೆ ಮನವಿಪತ್ರ ನೀಡಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕರು ಹಾಗೂ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ದಸರಾ ರಜೆಯಲ್ಲಿ ತರಗತಿ ನಡೆಸುವಂತೆ ಸೂಚಿಸಲಾಗಿದೆ. ಆದರೆ, ಇದನ್ನು ಕಡ್ಡಾಯ ಮಾಡಿಲ್ಲ. ಕೆಲ ಶಿಕ್ಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹಿತಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದು ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.ರಜಾ ಅವಧಿಯಲ್ಲಿ ತರಗತಿ ನಡೆಸಬೇಕು ಎಂದು ಕಡ್ಡಾಯ ಮಾಡಿರುವುದು ಸರಿಯಲ್ಲ. ಮನೋವೈಜ್ಞಾನಿಕವಾಗಿಯೂ ಮಕ್ಕಳಿಗೆ ರಜೆ ಅಗತ್ಯವಿದೆ. ಅದಕ್ಕಾಗಿ ತರಗತಿ ನಡೆಸುವುದು ಬೇಡ ಎಂದು ಜಿಪಂ ಸಿಇಒಗೆ, ಡಿಡಿಪಿಐ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಹೇಳಿದರು.