ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನತೆಗೆ ಅತ್ಯಾವಶ್ಯಕವಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಆದರೆ ಪಟ್ಟಣದಲ್ಲಿ ಕೆಲವು ಘಟಕಗಳು ಬೀಗ ಜಡಿದುಕೊಂಡಿರುವುದು ಹಾಗೂ ಕೆಲವು ಕೆಟ್ಟು ನಿಂತಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.
ಪಟ್ಟಣದ ಉದ್ಭವ ಮಹಾ ಗಣಪತಿ ದೇವಸ್ಥಾನ, ಸಂತೆ ಮಾರುಕಟ್ಟೆ, ಚಪ್ಪರದಹಳ್ಳಿ, ಕೋಟೆ, ಮಾರುತಿ ನಗರ, ಶುಗರ್ ಫ್ಯಾಕ್ಟರಿ, 23ನೇ ವಾರ್ಡ್, 4ನೇ ವಾರ್ಡ್ ಹಾಗೂ ಕೆಇಬಿ ಪ್ರದೇಶ ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಸ್ಲಂ ಬೋರ್ಡ್ ಮತ್ತು ಆರ್‌ಡಬ್ಲ್ಯುಎಸ್ ಅಡಿಯಲ್ಲಿ ಒಟ್ಟು 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಈ ಘಟಕಗಳಲ್ಲಿ ಕೆಲವು ನಿರ್ವಹಣೆಯ ಕೊರತೆಯಿಂದ ಬಳಕೆಗೆ ಅನರ್ಹವಾಗಿವೆ.ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಶುದ್ಧ ಕುಡಿಯುವ ನೀರಿನ ಘಟಕ ಗುತ್ತಿಗೆ ಪಡೆದವರ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸದೇ ಹಲವು ತಿಂಗಳುಗಳಾಗಿವೆ. ಜತೆಗೆ ಎಂಡಿ ಕ್ಯಾಂಪ್ ಹಾಗೂ 4ನೇ ವಾರ್ಡ್‌ನಲ್ಲಿ ಇರುವ ಎರಡು ಘಟಕಗಳು ಕೆಟ್ಟು ನಿಂತಿದ್ದು, ಇವುಗಳ ದುರಸ್ತಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಒಟ್ಟಾರೆ ಪಟ್ಟಣದಲ್ಲಿ ಕನಿಷ್ಠ ಮೂರು ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅವುಗಳು ಇದ್ದು ಇಲ್ಲದಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣ ಕ್ರಮಕ್ಕೆ ಆಗ್ರಹ: ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೆಟ್ಟು ನಿಂತಿರುವ ಘಟಕಗಳನ್ನು ತಕ್ಷಣ ದುರಸ್ತಿಗೊಳಿಸಿ ಮರುಪ್ರಾರಂಭಿಸಬೇಕು. ಗುತ್ತಿಗೆ ಪಡೆದು ನಿರ್ವಹಣೆ ಮಾಡದೇ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದಲ್ಲಿ ಹೊಸ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಎಂ.ಡಿ. ಕ್ಯಾಂಪ್‌ನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ಹಲವು ವರ್ಷಗಳೇ ಕಳೆದಿದೆ. ಇದರಿಂದಾಗಿ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಅನುಕೂಲತೆ ಕಲ್ಪಿಸಬೇಕು ಎನ್ನುತ್ತಾರೆ ಕಾನೂನು ವಿದ್ಯಾರ್ಥಿ ಶಾಂತಕುಮಾರ್.