ಖಟಕ್ ಚಿಂಚೋಳಿ ಬಳಿ ಬಹುಗ್ರಾಮ ಯೋಜನೆ ಕಾಮಗಾರಿ ವೀಕ್ಷಣೆ ಕನ್ನಡಪ್ರಭ ವಾರ್ತೆ ಭಾಲ್ಕಿ ತಾಲೂಕಿನ 64 ಜನವಸತಿ (ಹಳ್ಳಿ) ಪ್ರದೇಶಗಳಿಗೆ ಮುಂದಿನ 6 ತಿಂಗಳೊಳಗೆ ಶಾಶ್ವತ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ತಾಲೂಕಿನ ಖಟಕ್ ಚಿಂಚೋಳಿ ಸಮೀಪ ಶನಿವಾರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿ, ಪಟ್ಟಣಕ್ಕೆ ಈಗಾಗಲೇ ಸುಮಾರು 140 ಕೋಟಿ ರು. ವೆಚ್ಚದಲ್ಲಿ ಕಾರಂಜಾ ಜಲಾಶಯದ ಮೂಲಕ ನೆರವಾಗಿ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಪಟ್ಟಣದ ಸುಮಾರು 50 ಸಾವಿರ ಜನರಿಗೆ 24/7 ಶುದ್ಧ ನೀರು ಒದಗಿಸಲಾಗುತ್ತಿದೆ. ಇದೀಗ ಮಾರ್ಗ ಮಧ್ಯದ 64 ಹಳ್ಳಿಗಳಿಗೆ ಖಟಕ್ ಚಿಂಚೋಳಿ ಸಮೀಪ ನಿರ್ಮಿಸಿರುವ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕದ ಮೂಲಕ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಸುಮಾರು 124 ಕೋಟಿ ರು.ಅನುದಾನ ಮಂಜೂರು ಮಾಡಿಸಲಾಗಿದೆ. ಸುಲ್ತಾನಬಾದ್ ವಾಡಿ, ಚಳಕಾಪೂರ ಮತ್ತು ರಾಮಟೇಕಣಿ ವಲಯಗಳಲ್ಲಿ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಟ್ಯಾಂಕ್‌ಗಳ ಮೂಲಕ 64 ಹಳ್ಳಿಗಳ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಆಗಲಿದೆ. ಕಾರಂಜಾ ಜಲಾಶಯದಲ್ಲಿ ನೀರಿನ ಮೂಲ ಇರುವರೆಗೂ ಈ ಎಲ್ಲ ಹಳ್ಳಿಗಳ ಸುಮಾರು 1,07,000 ಜನರಿಗೆ ಶಾಶ್ವತವಾಗಿ ಶುದ್ಧ ನೀರು ಲಭ್ಯವಾಗಲಿದೆ ಎಂದರು. ಈ 64 ಹಳ್ಳಿಗಳ ಜತೆಗೆ ಮಳಚಾಪೂರ ಸೇರಿ 55 ಜನವಸತಿ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ಸಿಗಲಿದೆ. ಅದಲ್ಲದೇ ಗಡಿ ಭಾಗದ ಅಳವಾಯಿ, ಮೇಹಕರ್ ಮತ್ತು ವಾಂಜರಖೇಡ ಗ್ರಾಮಗಳಲ್ಲಿ ಶಾಶ್ವತ ನೀರು ಪೂರೈಕೆಗೆ ತಲಾ 5 ಕೋಟಿ ರು.ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಮುಗನೂರ್, ಅಧಿಕಾರಿಗಳು, ಗ್ರಾಮಸ್ಥರು ಇದ್ದರು. -- ಚಿತ್ರ 28ಬಿಡಿಆರ್52 ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಸಮೀಪ ಬಹುಗ್ರಾಮ ಯೋಜನೆ ಕಾಮಗಾರಿಗೆ ಶೇಖರಣೆ ಆಗಿರುವ ಕೊಳವೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು. --