ಮಳೆನೀರು ಹರಿಯಲು ಚರಂಡಿಗಳ ಸ್ವಚ್ಛತೆಗೆ ಚಾಲನೆ: ಮೈಲಪ್ಪ

KannadaprabhaNewsNetwork | Published : May 24, 2025 1:05 AM
ಮಳೆಗಾಲ ಆರಂಭ ಹಿನ್ನೆಲೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಪೂರಕವಾಗಿ ಚರಂಡಿಗಳಲ್ಲಿ ಸಂಗ್ರಹವಾದ ಕಸ- ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಹೇಳಿದ್ದಾರೆ.
Follow Us

- ಹೊನ್ನಾಳಿ ಪಟ್ಟಣ ಖಾಸಗಿ ಬಸ್ ನಿಲ್ದಾಣದ ಚರಂಡಿಗಳ ಸ್ವಚ್ಛತೆ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಳೆಗಾಲ ಆರಂಭ ಹಿನ್ನೆಲೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯಲು ಪೂರಕವಾಗಿ ಚರಂಡಿಗಳಲ್ಲಿ ಸಂಗ್ರಹವಾದ ಕಸ- ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ ಹೇಳಿದರು.

ಶುಕ್ರವಾರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಚರಂಡಿ ಸ್ವಚ್ಛತೆ ಕೆಲಸ ಪರಿಶೀಲಿಸಿ ಅವರು ಮಾತನಾಡಿದರು. ಈಗಾಗಲೇ ಗೌರಿಹಳ್ಳ, ಕೆಎಸ್‌ಆರ್‌ಟಿಸಿ ರಸ್ತೆ, ಮರಳೋಣಿ ರಸ್ತೆ, ಮಾರಿಕೊಪ್ಪ, ಟಿ.ಬಿ. ವೃತ್ತ ಹಾಗೂ ನ್ಯಾಮತಿ ಎಡ ಹಾಗೂ ಬಲಭಾಗದ ರಸ್ತೆ ಚಂರಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಬಾಕಿ ಇರುವ ಸಂಪಿಗೆ ರಸ್ತೆ ಹಾಗೂ ಇತರ ರಸ್ತೆಗಳ ಚರಂಡಿಗಳನ್ನು ಸಹ ಸ್ವಚ್ಛತೆ ಮಾಡಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ಜಿಲ್ಲಾಧಿಕಾರಿ ನಿರ್ದೇಶನದಂತೆ ಪಟ್ಟಣದ ಎಲ್ಲ ಚರಂಡಿಗಳ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದ್ದೇವೆ. ಮಳೆಗಾಲಕ್ಕೂ ಮುನ್ನ ಚರಂಡಿಗಳ ಸ್ವಚ್ಛತೆಯಾದಲ್ಲಿ ನೀರು ಸರಾಗವಾಗಿ ರಾಜಕಾಲುವೆ ಮುಖಾಂತರ ಹರಿದುಹೋಗುತ್ತದೆ. ಇಲ್ಲವಾದರೆ ಚರಂಡಿ ನೀರು ರಸ್ತೆಗಳಿಗೆ ನುಗ್ಗುತ್ತದೆ. ಈ ಹಿನ್ನೆಲೆ ಮಳೆಗಾಲಕ್ಕೂ ಮುನ್ನವೇ ಪೌರ ಕಾರ್ಮಿಕರ ಮುಖೇನ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಪ್ಲಾಸ್ಟಿಕ್ ಇನ್ನಿತರೆ ಕಸ-ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಪುರಸಭೆ ನಾಗರಿಕರಲ್ಲಿ ಎಷ್ಟೇ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇನ್ನೂ ಮುಂದಾದರೂ ನಾಗರಿಕರು ಪ್ಲಾಸ್ಟಿಕ್ ಬಳಸುವುದು ಬಿಡಬೇಕು. ಅಥವಾ ಬಳಸಿದ ಪ್ಲಾಸ್ಟಿಕ್‌ನ್ನು ಕಸದ ವಾಹನಗಳಲ್ಲಿ ಹಾಕಬೇಕು. ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು ಎಂದು ಮನವಿ ಮಾಡಿದರು.

ಬಿಸಿನೀರು ಕುಡಿಯಿರಿ:

ಮಳೆಗಾಲ ಪ್ರಾರಂಭ ಆಗುತ್ತಿರುವುದರಿಂದ ಈಗಾಗಲೇ ಜನರಲ್ಲಿ ಶೀತ, ಕೆಮ್ಮು, ಜ್ವರಬಾಧೆ ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ಶೀತ- ಕೆಮ್ಮು- ಜ್ವರಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪ್ರತಿದಿನ ನಾಗರಿಕರು ಕುದಿಸಿ, ಆರಿಸಿದ ನೀರನ್ನೇ ಕುಡಿಯಬೇಕು ಎಂದು ವಿನಂತಿಸಿದರು.

ಬಿ ಖಾತಾ ನೋಂದಣಿ ಅವಧಿ ವಿಸ್ತರಣೆ:

ಬಿ ಖಾತಾ ನೀಡುವ ಅವಧಿಯನ್ನು ರಾಜ್ಯ ಸರ್ಕಾರ 3 ತಿಂಗಳವರೆಗೆ ವಿಸ್ತರಿಸಿದೆ. ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಯಾರು ಬಿ ಖಾತಾ ಮಾಡಿಸಬೇಕೋ ಅಂಥವರು ಕೂಡಲೆ ಬಿ ಖಾತೆ ಮಾಡಿಸಿಕೊಳ್ಳಿ. ಇದುವರೆವಿಗೂ 300 ಬಿ ಖಾತಾಗಳ ನೋಂದಣಿ ಮಾಡಿಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್‌ ನಾಯ್ಕ್, ಶಿವಣ್ಣ, ಹಳದಪ್ಪ, ಪೌರ ಕಾರ್ಮಿಕರು ಹಾಗೂ ಕೆಲ ಆಟೋ ಚಾಲಕರು ಇದ್ದರು.

- - -

-23ಎಚ್.ಎಲ್.ಐ1.ಜೆಪಿಜಿ:

ಮಳೆಗಾಲ ಹಿನ್ನೆಲೆ ಪುರಸಭೆ ವತಿಯಿಂದ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಬಳಿಯ ಚರಂಡಿಗಳ ಸ್ವಚ್ಛಗೊಳಿಸಲಾಯಿತು. ಪುರಸಬೆ ಅಧ್ಯಕ್ಷ ಎ.ಕೆ. ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಹಿರಿಯ ಆರೋಗ್ಯ ನಿರೀಕ್ಷಕ ಪರಮೇಶ್‌ ನಾಯ್ಕ್, ಶಿವಣ್ಣ, ಹಳದಪ್ಪ ಇತರರು ಇದ್ದರು.