*ಜಿಲ್ಲಾಧಿಕಾರಿ ಕಚೇರಿ ಬಳಿ ರಸ್ತೆ, ಖಾಲಿ ಜಾಗದಲ್ಲಿ ಶ್ರಮದಾನ । ನ್ಯಾಯ ಸಿಗುವವರೆಗೂ ಹೋರಾಟ: ಡಾ.ಕೊಸಗಿ
ಕನ್ನಡಪ್ರಭ ವಾರ್ತೆ ದಾವಣಗೆರೆಸೇವೆ ಕಾಯಂಗೊಳಿಸಲು ಒತ್ತಾಯಿಸಿ ಸೊಪ್ಪು, ಕಡ್ಲೇಗಿಡ, ಟೀ ಮಾರಾಟ ಮಾಡಿ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಡಳಿತ ಭವನ ಎದುರಿನ ಸಾರ್ವಜನಿಕ ರಸ್ತೆಗಳ ಗುರುವಾರ ಸ್ವಚ್ಛಗೊಳಿಸಿ ಚಳವಳಿ ಮುಂದುವರಿಸಿದರು.
ನಗರದ ಡಿಸಿ ಕಚೇರಿ ಮುಂಭಾಗ ಮುಷ್ಕರ ಕೈಗೊಂಡಿರುವ ಸ್ಥಳದಲ್ಲಿ ಅನಿರ್ದಿಷ್ಟಾವಧಿಗೆ ತರಗತಿ ಬಹಿಷ್ಕರಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಮುಷ್ಕರ ಕೈಗೊಂಡರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ್, ಅತಿಥಿ ಬೋಧಕ ಡಾ.ಬಸವರಾಜ ಮಾತನಾಡಿ, ನಮ್ಮ ಸೇವೆ ಕಾಯಂಗೆ ಒತ್ತಾಯಿಸಿ ಇಂದು ಪೊರಕೆ ಹಿಡಿದು, ಡಿಸಿ ಕಚೇರಿ ಬಳಿ ರಸ್ತೆ, ಖಾಲಿ ಜಾಗ ದುರಸ್ತಿ ಮಾಡಿ ಅತಿಥಿ ಬೋಧಕರ ಸೇವೆ ಕಾಯಂಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಸುಮಾರು 2 ದಶಕ ಕಾಲ ಸರ್ಕಾರದ ಕೆಲಸ ಮಾಡಿದರೂ ಇಂದಿಗೂ ಶೋಷಣೆ ಮಾಡಲಾಗುತ್ತಿದೆ. ಸರ್ಕಾರದ ಕಣ್ಣು ತೆರೆಸಲು ಕಸ ಹೊಡೆದಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಕಳೆದ 2 ದಶಕದಿಂದಲೂ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದೇವೆ. ಆಗಿನಿಂದಲೂ ಸೇವೆ ಕಾಯಂಗೆ ಒತ್ತಾಯಿಸಿ ರಾಜ್ಯವ್ಯಾಪಿ ವಿವಿಧ ಹಂತದ ಹೋರಾಟ ನಡೆಸಿದ್ದರೂ ಸರ್ಕಾರ ಮಾತ್ರ ಬೇಡಿಕೆಗೆ ಸೊಪ್ಪು ಹಾಕಿಲ್ಲ. ದೆಹಲಿ, ಪಂಜಾಬ್, ಹರಿಯಾಣ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಅತಿಥಿ ಬೋಧಕರ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ 11 ಸಾವಿರ ಅತಿಥಿ ಬೋಧಕರು, ಅವಲಂಬಿತರು 11 ಲಕ್ಷಕ್ಕೂ ಜನರಿದ್ದಾರೆ. ಜುಲೈನಿಂದ ನಮಗೆ ಸಂಬಳ ಇಲ್ಲ. 7-8 ತಿಂಗಳು ವೇತನ ಕಡಿಮೆ ನೀಡುತ್ತಾರೆ. ಇದರಿಂದ ಜೀವನ ಹೇಗೆ ಸಾಧ್ಯ ಎಂದು ಅಳಲು ತೋಡಿಕೊಂಡರು.ಸಂಘದ ಎಸ್.ಶುಭಾ, ಎಂ.ಜಗದೀಶ, ಎಂ.ಕೆ.ಶೀತಲ್, ನರೇಂದ್ರ ರಾಥೋಡ್, ಬಿ.ಪಿ.ರವೀಂದ್ರ, ಅನಂತಾಚಾರಿ, ಡಾ.ಸಿ.ಎಚ್.ಪ್ರವೀಣಕುಮಾರ, ಆರ್.ಸಂತೋಷಕುಮಾರ, ಎಂ.ಆರ್.ರಾಘವೇಂದ್ರ, ಬಿ.ಜಿ.ಸಿದ್ದೇಶಪ್ಪ, ಎಸ್.ವೆಂಕಟೇಶ, ಇ.ಬೋರೇಶ, ಜಿ.ಬಿ.ಮಂಜುಳಾ, ಇ.ವಿ.ಮಾನಸಾ, ಎಂ.ಎಸ್.ಸ್ಮಿತಾ, ಜಿ.ಬಿ.ಅರುಣಕುಮಾರಿ, ಸಮೀನಾ ಎಂ.ರಫಿ, ಇ.ರೇಖಾ, ಟಿ.ಎಸ್.ಲಕ್ಷ್ಮಿದೇವಿ ಇತರರಿದ್ದರು. ಸಿಎಂ ಆದ ನಂತರ ಮನಸ್ಸು ಮಾಡುತ್ತಿಲ್ಲವೇಕೆ?
ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ 16 ಸಾವಿರ ಅತಿಥಿ ಬೋಧಕರನ್ನು ದೆಹಲಿ ಇತರೆ ರಾಜ್ಯಗಳ ಮಾದರಿಯಲ್ಲಿ ಕಾಯಂ ಮಾಡದ ಬಗ್ಗೆ ಧ್ವನಿ ಎತ್ತಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ಅತಿಥಿ ಬೋಧಕರ ಸೇವೆ ಕಾಯಂಗೆ ಯಾಕೆ ಮನಸ್ಸು ಮಾಡುತ್ತಿಲ್ಲ. ಚುನಾವಣೆ ಪೂರ್ವದಲ್ಲಿ ಅತಿಥಿ ಬೋಧಕರ ಸೇವೆ ಕಾಯಂ ಭರವಸೆ ಕಾಂಗ್ರೆಸ್ ನೀಡಿತ್ತು. ಈಗ ನಿಮ್ಮ ಕೈಯಲ್ಲೇ ಅಧಿಕಾರವಿದ್ದರೂ ಯಾಕೆ ಸೇವೆ ಕಾಯಂ ಮಾಡುತ್ತಿಲ್ಲ.ಡಾ.ಕೊಸಗಿ ಶ್ಯಾಮಪ್ರಸಾದ್ , ಜಿಲ್ಲಾಧ್ಯಕ್ಷ , ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ..................