* ಮುಖಂಡನ ಕಣ್ಣಿಗೆ ಬೀಳುತ್ತಿದ್ದಂತೆ ಕೆಲಸಗಾರರು, ಕೆಲಸ ಮಾಡಿಸುತ್ತಿದ್ದಾತ ನಾಪತ್ತೆ
* 2 ತಿಂಗಳ ಹಿಂದೆ ಛೇಂಬರ್‌ಗೆ ಇಳಿದು ಅಸ್ವಸ್ಥನಾಗಿದ್ದಾತ ಮೃತಪಟ್ಟ ಬೆನ್ನಲ್ಲೇ ಈ ಘಟನೆಕನ್ನಡಪ್ರಭ ವಾರ್ತೆ ದಾವಣಗೆರೆ
ಕೊಳಚೆಯಿಂದ ಕಟ್ಟಿಕೊಂಡಿದ್ದ ಒಳ ಚರಂಡಿ ಗುಂಡಿ ಸ್ವಚ್ಛತೆಗೆ ಮಾನವರನ್ನು ಬಳಸಿಕೊಂಡ ಅಮಾನವೀಯ ಘಟನೆ ವಿದ್ಯಾನಗರಿಯೆಂಬ ಖ್ಯಾತಿ ಪಡೆದ ದಾವಣಗೆರೆ ಮಹಾನಗರದಲ್ಲಿ ಶುಕ್ರವಾರ ನಡೆದಿದೆ.ನಗರದ ಆರ್.ಎಚ್.ಛತ್ರಕ್ಕೆ ಹೊಂದಿರುವ ಹೂವಿನ ಮಳಿಗೆಗಳು, ಬಾಟಾ ಶೋ ರೂಂ ಎದುರಿನಲ್ಲಿ ಕೂಲಿಗೆ ಬಂದ ಬಡವರ ಮಲದ ಗುಂಡಿಗೆ ಇಳಿಸಿ, ಒಳ ಚರಂಡಿ ನೀರು ಕಟ್ಟಿರುವುದನ್ನು ತೆರವು ಮಾಡಿಸುತ್ತಿದ್ದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಕಂಡು ಬಂದಿತು.
ಒಳ ಚರಂಡಿ ಪೈಪ್‌ನಲ್ಲಿ ತ್ಯಾಜ್ಯ ತುಂಬಿ ಸರಾಗವಾಗಿ ಹರಿಯದೇ, ಕಟ್ಟಿ ನಿಂತಿತ್ತು. ಅದನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ 3-4 ಮಂದಿ ಕೆಲಸಗಾರರು ತೊಡಗಿದ್ದು, ಒಬ್ಬ ವ್ಯಕ್ತಿ ಪಕ್ಕದಲ್ಲೇ ನಿಂತು ಕೆಲಸ ಮಾಡಿಸುತ್ತಿದ್ದರು. ಇದು ಪಾಲಿಕೆ ಕೆಲಸವಾ ಅಥವಾ ಖಾಸಗಿಯವರದ್ದಾ ಎಂಬುದು ಸ್ಪಷ್ಟವಾಗಿಲ್ಲ. ತೊಡೆಮಟ್ಟದ ಒಳ ಚರಂಡಿ ಗುಂಡಿಗೆ ವ್ಯಕ್ತಿಯನ್ನು ಇಳಿಸಿದ್ದು ಕಂಡ ಜಿಲ್ಲಾ ಅಖಿಲ ಕರ್ನಾಟಕ ಮ್ಯಾನ್ ಹೋಲ್ ಸ್ಕಾವೆಂಜರ್ಸ್ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಚ್.ಎನ್.ಉಚ್ಚೆಂಗೆಪ್ಪ ಸ್ಥಳಕ್ಕೆ ತೆರಳಿ, ಕೆಲಸ ಮಾಡುತ್ತಿದ್ದುದನ್ನು ತಡೆದಿದ್ದಾರೆ.ಹೀಗೆಲ್ಲಾ ಒಳ ಚರಂಡಿ ಗುಂಡಿಗೆ ಇಳಿದು, ಕೆಲಸ ಮಾಡುವುದು, ಕೆಲಸ ಮಾಡಿಸುವುದು ಶಿಕ್ಷಾರ್ಹ ಅಪರಾಧ ಎಂಬುದು ನಿಮಗೆ ಗೊತ್ತಿಲ್ಲವೇ ಎಂಬುದಾಗಿ ಸಂಘದ ಮುಖಂಡ ಪ್ರಶ್ನಿಸಿದರೆ, ಹೊಲಸಿನಲ್ಲಿ ಇಳಿದಿದ್ದ ಅಮಾಯಕ ಕೆಲಸಗಾರ ತಮಗೆ ಏನೂ ಗೊತ್ತಿಲ್ಲ. ಸಾಹುಕಾರರ ಕೇಳಿ ಎಂಬುದಾಗಿ ತನ್ನ ಪಾಡಿಗೆ ಕೆಲಸಕ್ಕೆ ಮುಂದಾದ. ಆಗ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ನಿನ್ನ ಪಾಡಿಗೆ ಸ್ವಚ್ಛತೆ ಕೆಲಸ ಮಾಡುವಂತೆ ಕೆಲಸಗಾರರಿಗೆ ಸೂಚಿಸಿದ್ದಾರೆ. ಸಂಘದ ಮುಖಂಡ ಯಾವ ಊರು ನಿಮ್ಮದೆಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ, ಕೆಲಸಗಾರರು ಛತ್ರದಲ್ಲಿ ಎಲೆ ಎತ್ತುವವರು ಎಂದಿದ್ದಾರೆ. ಅಲ್ಲೇ ಜೊತೆಗಿದ್ದ ಇತರೆ ಕೆಲಸಗಾರರು ಗುಂಡಿಯಲ್ಲಿದ್ದ ವ್ಯಕ್ತಿಗೆ ಮೇಲೆ ಬರುವಂತೆ ಹೇಳಿದ್ದಾರೆ.
ಒಳ ಚರಂಡಿ ಛೇಂಬರ್, ಗುಂಡಿಗೆ ಮನುಷ್ಯರು ಇಳಿಯಬಾರದೆಂಬ ಅರಿವು ನಿಮಗೆ ಇಲ್ಲವೇ? ಇಂತಹ ಕೆಲಸವನ್ನು ಯಂತ್ರಗಳಿಂದ ಮಾಡಿಸಬೇಕೆಂಬುದು ಗೊತ್ತಿಲ್ಲವೇ? ಇಂತಹ ಕೆಲಸ ಮಾಡಿದವರು, ಮಾಡಿಸಿದವರು ಜೈಲಿಗೆ ಹೋಗುತ್ತೀರಿ ಎಂಬುದಾಗಿ ಹೇಳಿದ್ದರಿಂದ ಹೆದರಿದ ಕೆಲಸಗಾರರು ಅಷ್ಟಕ್ಕೆ ಕೆಲಸ ಬಿಟ್ಟು ತೆರಳಿದ್ದಾರೆ.ಕಳೆದ ವಾರವಷ್ಟೇ ಛೇಂಬರ್‌ಗೆ ಇಳಿದಿದ್ದ ವ್ಯಕ್ತಿ ಸಾವು
ಮಹಾನಗರದಲ್ಲಿ ಕಳೆದ 2 ತಿಂಗಳ ಹಿಂದೆ ಒಳ ಚರಂಡಿ ಛೇಂಬರ್ ಸ್ವಚ್ಛಗೊಳಿಸಿ, ಮಲಿನ ನೀರು ಹರಿದು ಹೋಗುವ ಕೆಲಸ ಮಾಡುತ್ತಿದ್ದ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಪರಶುರಾಮ ಎಂಬ ವ್ಯಕ್ತಿಯು ಡಿ.31ರ ಸಂಜೆ 7.30ರ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿನ 25ನೇ ವಾರ್ಡ್ ನಲ್ಲಿ ಘಟನೆ ನಡೆದಿದ್ದು, ಒಳ ಚರಂಡಿ ಗುಂಡಿ(ಛೇಂಬರ್)ಗೆ ಕೆಲಸಗಾರನನ್ನು ಇಳಿಸಿದ್ದ ಪಾಲಿಕೆ ಸೂಪರ್ ವೈಸರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ವಾಸುದೇವ, ಕಾರ್ಯದರ್ಶಿ ಎನ್.ಉಚ್ಚೆಂಗಪ್ಪ, ಭಾಗ್ಯಮ್ಮ, ಪೂರ್ಣಮ್ಮ, ಅನ್ನಪೂರ್ಣಮ್ಮ, ಎನ್.ಮಂಜುನಾಥ ಇತರರು ಒತ್ತಾಯಿಸಿದ್ದಾರೆ. ರಾಜ್ಯಾದ್ಯಂತ ನಡೆದ ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ಸ್ ಘಟನೆಗಳನ್ನು ಬೆಂಗಳೂರಿನ ಉಚ್ಛ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ, ಜ. 3ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿ, ವಿಚಾರಣೆಗೆ ಮುಂದಾಗಿರುವುದಕ್ಕೆ ಸಂಘದಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.