ದೇವಿಹೊಸೂರು ಗ್ರಾಮದಲ್ಲಿ ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Sep 19, 2024, 01:49 AM IST
೧೮ಎಚ್‌ವಿಆರ್೬ | Kannada Prabha

ಸಾರಾಂಶ

ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ “ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ " ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ಶ್ರಮದಾನ ಮಾಡುವ ಮೂಲಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ್ ಚಾಲನೆ ನೀಡಿದರು.

ಹಾವೇರಿ: ತಾಲೂಕಿನ ದೇವಿಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಗಿದ್ದ “ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ " ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ಶ್ರಮದಾನ ಮಾಡುವ ಮೂಲಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ್ ಚಾಲನೆ ನೀಡಿದರು.

ಸ್ವ ಸಹಾಯ ಸಂಘದವರು, ನಾಗರಿಕ ಸೇವಾ ಸಂಘ, ಸಮುದಾಯ ಸಂಘಟನೆಗಳು, ಶಾಲಾ-ಕಾಲೇಜಿನ ಎನ್‌ಎಸ್‌ಎಸ್‌, ಎನ್‌ಸಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಯೋಗದಲ್ಲಿ ನರೇಗಾ ಯೋಜನೆಯಡಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಹಳ್ಳಿಗಳಲ್ಲಿ ಶ್ರಮದಾನ ಮೂಲಕ ಊರಿನ ಪ್ರಮುಖ ಬೀದಿಗಳು, ಶಾಲಾ ಆವರಣ, ಆಟದ ಮೈದಾನ, ಕಲ್ಯಾಣಿ, ಧಾರ್ಮಿಕ ಕೇಂದ್ರಗಳ ಸಮೀಪ ಸ್ವಚ್ಛಗೊಳಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮನೆ ಮನೆ ಭೇಟಿ ಮೂಲಕ ವೈಜ್ಞಾನಿಕವಾಗಿ ಹಸಿ ಕಸ ಒಣ ಕಸ ಸಂಗ್ರಹಿಸುವುದು, ಜಲ ಮೂಲಗಳಾದ ಕೆರೆ-ಕಟ್ಟೆಗಳ ಸುತ್ತಮುತ್ತ ಸ್ವಚ್ಛಗೊಳಿಸುವುದು ಮತ್ತು ನೀರಿನ ಮಿತಬಳಕೆ, ನೀರು ಪೋಲಾಗುವಿಕೆ ತಡೆಗಟ್ಟುವುದು, ಶಾಲಾ ಮಕ್ಕಳಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರಿವು ಮೂಡಿಸಲಾಯಿತು.

ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ ಎಂಬ ವಿಷಯ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಘೋಷವಾಕ್ಯ ಬರೆಯಲಾಯಿತು. ನರೇಗಾ ಯೋಜನೆಯಡಿ ನೈರ್ಮಲ್ಯ ಗ್ರಾಮಗಳ ನಿರ್ಮಾಣಕ್ಕಾಗಿ ಅನುಷ್ಠಾನದಲ್ಲಿರುವ ಬೂದು ನೀರು ನಿರ್ವಹಣೆ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಲು ವಿಭಿನ್ನ ಐಇಸಿ ಚಟುವಟಿಕೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ, ಸಹಾಯಕ ಕಾರ್ಯದರ್ಶಿ ಶಿವಲಿಂಗಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ ಪ್ರಸಾದ ಕಟ್ಟಿಮನಿ, ಸಹಾಯಕ ನಿರ್ದೇಶಕ ಸಂದೀಪ ಎಸ್., ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಮುದಿಗೌಡ್ರ, ಉಪಾಧ್ಯಕ್ಷ ಮಹ್ಮದ್‌ ಜಾಫರ್ ಎರೇಸಿಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಸಾತೇನಹಳ್ಳಿ, ತಾಲೂಕು ಮಟ್ಟದ ಅಧಿಕಾರಿಗಳು, ಶಾಲಾ ಶಿಕ್ಷಕರು, ಪ್ರಾಥಮಿಕ ಆರೋಗ್ಯ ಮತ್ತು ಪಂಚಾಯಿತಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV