ಶ್ರೀರಂಗಪಟ್ಟಣದಲ್ಲಿ ಗಿಡ ನೆಟ್ಟು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

KannadaprabhaNewsNetwork | Updated : Oct 01 2024, 01:18 AM IST
30ಕೆಎಂಎನ್ ಡಿ30 | Kannada Prabha

ಶ್ರೀರಂಗಪಟ್ಟಣ ಸ್ಥಾನಘಟ್ಟ ಬಳಿ ಕಾವೇರಿ ನದಿ ತಡದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಪೇಪರ್ ಸೇರಿದಂತೆ ಇತರೆ ತ್ಯಾಜ್ಯಗಳನ್ನ ಸ್ವತಃ ನ್ಯಾಯಾಧೀಶರು ತಮ್ಮ ಕೈಗಳಿಗೆ ಹ್ಯಾಂಡ್‌ಗ್ಲೌಸ್ ಹಾಕಿಕೊಂಡು ಕಸ, ಕಡ್ಡಿಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ 3ನೇ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಟಿ.ಗೋಪಾಲಕೃಷ್ಣ ರೈ ಚಾಲನೆ ನೀಡಿದರು.

ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು, ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿ ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಾವು ವಾಸಿಸುವ ಮನೆ, ಕೆಸಲ ನಿರ್ವಹಿಸುವ ಕಚೇರಿ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಇದರ ಉದ್ದೇಶವಾಗಿದೆ ಎಂದರು.

ವೇದ ಬ್ರಹ್ಮ ಭಾನುಪ್ರಕಾಶ ಶರ್ಮಾ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ಮುಂದಿನ ಪೀಳಿಗೆಗೆ ಸ್ವಚ್ಛತೆಯ ಅರಿವು ನೀಡಬೇಕಿದೆ ಎಂದರು.

ಪಟ್ಟಣದ ಸ್ಥಾನಘಟ್ಟ ಬಳಿ ಕಾವೇರಿ ನದಿ ತಡದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಪೇಪರ್ ಸೇರಿದಂತೆ ಇತರೆ ತ್ಯಾಜ್ಯಗಳನ್ನ ಸ್ವತಃ ನ್ಯಾಯಾಧೀಶರು ತಮ್ಮ ಕೈಗಳಿಗೆ ಹ್ಯಾಂಡ್‌ಗ್ಲೌಸ್ ಹಾಕಿಕೊಂಡು ಕಸ, ಕಡ್ಡಿಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿದರು.

ನಂತರ ಪಟ್ಟಣದ ಕೋರ್ಟ್ ಮುಂಭಾಗದಲ್ಲಿನ ಪಾರ್ಕ್ ಸೇರಿದಂತೆ ಶ್ರೀರಂಗನಾಥಸ್ವಾಮಿ ಮೈದಾನದ ಬಳಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ನೀರುಳಿಸಿದರು. ಈ ವೇಳೆ ವಿದ್ಯಾರ್ಥಿಗಳು, ವಿವಿಧ ಸಂಘ, ಸಂಸ್ಥೆಯ ಪದಾಧಿಕಾರಿಗಳು ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ರೂಪ, ಅಪರ ಸಿವಿಲ್ ನ್ಯಾಯಾಧೀಶರಾದ ಎಚ್. ಮಹದೇವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶಾದ ಎಂ.ಹರೀಶ್‌ಕುಮಾರ್, ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಆರ್ ಹನುಮಂತರಾಯಪ್ಪ, ತಾಪಂ ಇಒ ವೇಣಿ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಡಿ.ಪವನ್‌ಗೌಡ, ಅಚೀವರ್ಸ್ ಅಕಾಡೆಮಿ ಅಧ್ಯಕ್ಷ ಆರ್.ರಾಘವೇಂದ್ರ, ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.