ರಾಮನಗರ: ಸ್ವಚ್ಛ ರಾಮನಗರಕ್ಕೆ ಮುಂದಾಗಿರುವ ನಗರಸಭೆ ಇದೀಗ ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಿದೆ.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಉಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತ ಜಯಣ್ಣ ಹಾಗೂ ಸದಸ್ಯರೊಂದಿಗೆ ಬೆಳ್ಳಂಬೆಳಗ್ಗೆ ವಿವಿಧ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.
ಮಾರುತಿ ನಗರ, ಎಂ.ಜಿ.ರಸ್ತೆ ಆಲದ ಮರ ವೃತ್ತ, ಕಾಯಿಸೊಪ್ಪಿನ ಬೀದಿ ಹೊಳೆ ರಸ್ತೆ, ವಿವೇಕಾನಂದ ನಗರ ಮುಖ್ಯ ರಸ್ತೆ, ಪಟೇಲ್ ಶಾಲೆ ಬಳಿ, ಮೆಹಬೂಬ ನಗರ, ಟಿಪ್ಪುನಗರ, ರೆಹಮಾನಿಯ ನಗರ ಮುಂತಾದ ವಾರ್ಡುಗಳಲ್ಲಿ ಅಧ್ಯಕ್ಷ ಶೇಷಾದ್ರಿ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂಚರಿಸಿ ಸ್ವಚ್ಛವಾಗಿರುವ ಖಾಲಿ ನಿವೇಶನಗಳ ಪರಿಶೀಲನೆ ನಡೆಸಿದರು.ಈ ವೇಳೆ ಮಾತನಾಡಿದ ಕೆ.ಶೇಷಾದ್ರಿ, ರಾಮನಗರದ ಸ್ವಚ್ಛ ಮತ್ತು ಶುದ್ಧ ಪರಿಸರಕ್ಕೆ ಸಂಕಲ್ಪ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳುಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ನಗರಸಭೆಯಿಂದ ಸ್ವಚ್ಛಗೊಳಿಸುತ್ತಿರುವ ನಿವೇಶನಕ್ಕೆ ಪ್ರತಿ ಚದರಡಿಗೆ ತಲಾ 1 ರು.ನಂತೆ ಸ್ವಚ್ಛತಾ ಶುಲ್ಕ ವಿಧಿಸಲಾಗುವುದು. ಅಂದರೆ 30-40 ಅಡಿ ಅಳತೆ ನಿವೇಶನಕ್ಕೆ 1200 ರು. ಶುಲ್ಕ ನಿಗದಿ ಪಡಿಸಲಾಗಿದೆ. ಈ ಶುಲ್ಕವನ್ನು ಆಸ್ತಿ ಕಂದಾಯಕ್ಕೆ ಸೇರಿಸಿ ಮಾಲೀಕರಿಂದ ಪಾವತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಸ್ವಚ್ಛ ರಾಮನಗರ ಸಂಕಲ್ಪಕ್ಕೆ ಅನುಗುಣವಾಗಿ ಮೊದಲ ಹೆಜ್ಜೆಯಾಗಿ ದಿನನಿತ್ಯ ಬೆಳಗ್ಗೆ ಜನ ಸಂಚಾರ ಆರಂಭವಾಗುವ ಮುನ್ನ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಚಳಿ, ಗಾಳಿಯನ್ನು ಲೆಕ್ಕಿಸದೆ ಪೌರಕಾರ್ಮಿಕರು ನಗರದ ಸೌಂದರ್ಯ ಮತ್ತು ನಾಗರಿಕರ ಆರೋಗ್ಯದ ದೃಷ್ಠಿಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮತ್ತೊಂದು ಹೆಜ್ಜೆಯಾಗಿ ಖಾಲಿ ನಿವೇಶನಗಳ ಸ್ವಚ್ಛತೆ ಆರಂಭವಾಗಿದೆ. ನಿವೇಶನಗಳ ಸ್ವಚ್ಛತೆ ಒಂದು ಬಾರಿಗೆ ಮಾತ್ರ ಮಾಡುತ್ತಿದ್ದೇವೆ. ಬಳಿಕ ನಿವೇಶನಗಳ ಮಾಲೀಕರೆ ಜಾಗೃತಿ ವಹಿಸಿ ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆಯ ಸದಸ್ಯರಾದ ಅಜ್ಮತ್, ಫೈರೋಜ್ ಪಾಷ, ಸೋಮಶೇಖರ್ (ಮಣಿ), ಮುತ್ತುರಾಜ್, ಪರಿಸರ ವಿಭಾಗದ ಎಇಇ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಮುಖಂಡರಾದ ಲಕ್ಷ್ಮೀಪತಿ, ಶಫಿ ಅಹಮದ್ ಇತರರು ಹಾಜರಿದ್ದರು.
ರಾಮನಗರ ನಗರಸಭೆ ಅಧ್ಯಕ್ಷ ಶೇಷಾದ್ರಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿರುವುದನ್ನು ವೀಕ್ಷಿಸಿದರು.