ಸ್ವಚ್ಛತೆಯಿಂದ ಜಂತುಹುಳು ನಿಯಂತ್ರಣ ಸಾಧ್ಯ: ಡಿಸಿ ದಿವಾಕರ

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ಮಕ್ಕಳು ಮೊದಲು ಜಂತುಹುಳುಗಳಿಂದ ರಕ್ಷಿಸಿಕೊಳ್ಳಲು, ಶುದ್ಧ ನೀರು ಕುಡಿಯಬೇಕು.

ಹೊಸಪೇಟೆ: ಜಂತುಹುಳುಗಳು ಮಾನವ ಆರೋಗ್ಯಕ್ಕೆ ಹಾನಿ ಮಾಡುವ ಗುಣ ಹೊಂದಿವೆ. ಸ್ವಚ್ಛತೆ ಕಾಪಾಡುವುದರಿಂದ ಹಾಗೂ ಜಂತುಹುಳು ನಾಶಕ ಮಾತ್ರೆಯನ್ನು ಸೇವಿಸುವುದರಿಂದ ಜಂತುಹುಳು ಬಾಧೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 1 ರಿಂದ 19 ವರ್ಷದ ಎಲ್ಲ ಮಕ್ಕಳಿಗೆ, ಎಲ್ಲ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರಿಣಾಮಕಾರಿಯಾದ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಾಮಾಣಿಕರಿಸಿದ ಜಂತುಹುಳು ನಾಶಕ ಮಾತ್ರೆಯನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಮಕ್ಕಳು ಮೊದಲು ಜಂತುಹುಳುಗಳಿಂದ ರಕ್ಷಿಸಿಕೊಳ್ಳಲು, ಶುದ್ಧ ನೀರು ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ, ಹಣ್ಣು, ತರಕಾರಿಗಳು ಹಾಗೂ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್‌.ಆರ್. ಶಂಕರ್ ನಾಯ್ಕ ಮಾತನಾಡಿ, ಜಂತುಹುಳು ಹೊಂದಿರುವ ಮಕ್ಕಳು ಅಪೌಷ್ಟಿಕತೆ, ರಕ್ತ ಹೀನತೆಯಿಂದಾಗಿ ಸದಾ ಬಳಲುತ್ತಿರುತ್ತಾರೆ. ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಜಂತುಹುಳು ಬಾಧೆ ನಿಯಂತ್ರಿಸಲು ಜಂತುಹುಳು ನಾಶಕ ಮಾತ್ರೆ ಸೇವಿಸಬೇಕು. ಮಾತ್ರೆ ಸೇವಿಸುವಾಗ ಉಸಿರು ಗಟ್ಟುವುದನ್ನು ತಪ್ಪಿಸಲು ಶುದ್ಧ ಕುಡಿಯುವ ನೀರು ಲಭ್ಯವಿರುವಂತೆ ನೋಡಿಕೊಂಡು ಮಾತ್ರೆ ಸೇವಿಸಬೇಕು. ಮಾತ್ರೆ ತೆಗೆದುಕೊಂಡ ನಂತರ ಕೆಲವೊಮ್ಮೆ ಮಕ್ಕಳಲ್ಲಿ ಸೌಮ್ಯ, ಹೊಟ್ಟೆ ನೋವು ಮತ್ತು ವಾಂತಿಯಾಗಬಹುದು. ಅವರು ಜಂತುಹುಳು ಹೊಂದಿದ್ದಲ್ಲಿ ಇವುಗಳನ್ನು ನಿರೀಕ್ಷಿಸಬಹುದು, ಇದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗರಾಜ ಹವಾಲ್ದಾರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಬಸವರಾಜ್, ಬಿಇಒ ಚನ್ನಬಸಪ್ಪ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ಸೇವಿಸಿ ತೋರಿಸಿದರು.

Share this article