ಹೊನ್ನಾವರದ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರು ಸಂಪೂರ್ಣ ಗಲೀಜು
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಪ್ರಮುಖ ಮೀನುಗಾರಿಕಾ ಸ್ಥಳ ಎನಿಸಿಕೊಂಡಿರುವ ಟೊಂಕಾ ಮೀನುಗಾರಿಕಾ ಬಂದರು ಕಸದ ರಾಶಿಯಿಂದ ತುಂಬಿದೆ. ಇಲ್ಲಿ ಓಡಾಡಲು ಅಸಹ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗಬ್ಬು ವಾಸನೆಯಲ್ಲಿ ಕಾರ್ಮಿಕರು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಕರಾವಳಿಯ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾದ ಹೊನ್ನಾವರದ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರು ಈಗ ಸಂಪೂರ್ಣವಾಗಿ ಗಲೀಜಿನಿಂದ ಕೂಡಿದೆ. ಮೀನುಗಾರಿಕಾ ಇಲಾಖೆಯ ಘೋರ ನಿರ್ಲಕ್ಷ್ಯದಿಂದಾಗಿ ಬಂದರಿನಾದ್ಯಂತ ಕಸ ಮತ್ತು ತ್ಯಾಜ್ಯದ ರಾಶಿ ತುಂಬಿ, ಚರಂಡಿಗಳು ತುಂಬಿದ್ದು ಅದರಲ್ಲಿ ರೋಗವನ್ನು ಹರಡಬಲ್ಲ ಕ್ರೀಮಿಗಳು ಸಹ ಉತ್ಪಾದನೆ ಆಗಿದ್ದು ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯು ಸೃಷ್ಟಿಯಾಗಿದೆ. ಬಂದರಿನ ಸಮೀಪದಲ್ಲಿ ಅಸಹ್ಯಕರ ವಾತಾವರಣ ಸೃಷ್ಟಿಸಿದೆ.
ಕೋಟಿಗಟ್ಟಲೆ ವಹಿವಾಟು ನಡೆಯುವ ಈ ಬಂದರಿನಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲೆಂದರಲ್ಲಿ ಮೀನು ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಹಳೆಯ ವಸ್ತುಗಳು, ಕಸದ ರಾಶಿಗಳು ಬಿದ್ದಿವೆ. ಇದರ ಜೊತೆಗೆ, ಬಂದರಿನ ಹಲವು ಪ್ರದೇಶಗಳು ನಿಯಂತ್ರಣವಿಲ್ಲದೆ ಬೆಳೆದ ಗಿಡಗಂಟಿಗಳು ಮತ್ತು ಪೊದೆಗಳಿಂದ ಆವೃತವಾಗಿವೆ.
ಕಾರ್ಮಿಕರು ಪ್ರತಿದಿನ ಜೀವ ಭಯದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಮೀನುಗಾರಿಕಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಣ್ಣು ಹಾಯಿಸದೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.