ಸ್ವಚ್ಛತೆ ಎಲ್ಲರ ಜವಾಬ್ದಾರಿ: ಶಾಸಕ ದೇಶಪಾಂಡೆ

KannadaprabhaNewsNetwork |  
Published : May 27, 2025, 01:33 AM IST
26ಎಚ್.ಎಲ್.ವೈ-3: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರು ಹಳಿಯಾಳ ಪುರಭವನದಲ್ಲಿ ಆಯೋಜಿಸಿದ ಹಳಿಯಾಳ-ದಾಂಡೇಲಿ ತಾಲೂಕಿನ ಸ್ವಚ್ಛತೆಯ ಕುರಿತಾದ ಸಭೆಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಬಹುತೇಕ ಮಂದಿಯ ದೃಷ್ಟಿಯಲ್ಲಿ ಸ್ವಚ್ಛತೆಯು ಸರ್ಕಾರಿ ಕಾರ್ಯಕ್ರಮವಾಗಿ ಬಿಟ್ಟಿದೆ.

ಹಳಿಯಾಳ: ಬಹುತೇಕ ಮಂದಿಯ ದೃಷ್ಟಿಯಲ್ಲಿ ಸ್ವಚ್ಛತೆಯು ಸರ್ಕಾರಿ ಕಾರ್ಯಕ್ರಮವಾಗಿ ಬಿಟ್ಟಿದೆ. ಈ ತಪ್ಪು ಗೃಹಿಕೆ ಹೋಗದ ಹೊರತು ಸ್ವಚ್ಛತೆಗೆ ಮಹತ್ವ ಬರುವುದಿಲ್ಲ. ಸ್ವಚ್ಛತೆ ಎಲ್ಲರ ಜವಾಬ್ದಾರಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಕರೆ ನೀಡಿದರು.

ಸೋಮವಾರ ಸಂಜೆ ಪಟ್ಟಣದ ಪುರಭವನದಲ್ಲಿ ನಡೆದ ಹಳಿಯಾಳ, ದಾಂಡೇಲಿ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ವಚ್ಛತೆಯ ಕುರಿತು ಚರ್ಚಿಸಲು ಆಯೋಜಿಸಿದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆ ಹಾಗೂ ದೈನಂದಿನ ಬದುಕಿನ ತೋಳಲಾಟದಲ್ಲಿ ನಾವು ಸ್ವಚ್ಛತೆಗೆ ಎಷ್ಟು ಮಹತ್ವ ಕೋಡಬೇಕಿತ್ತು ಅಷ್ಟೂ ಕೊಡುವಲ್ಲಿ ನಿಷ್ಕಾಳಜಿ ತೋರಿದ್ದೇವೆ. ಸ್ವಚ್ಛತೆ ಎಲ್ಲರ ಜವಾಬ್ದಾರಿ, ಕರ್ತವ್ಯವಾಗಬೇಕು. ಸ್ವಚ್ಛತೆಗೆ ಬಹಳ ಖರ್ಚು ಮಾಡಬೇಕೆಂದಿಲ್ಲ. ದೈನಂದಿನ ಬದುಕಿನ ಕೆಲ ಗಳಿಗೆಯನ್ನು ಸ್ವಚ್ಛತೆಗೆ ಮೀಸಲಾಗಿಟ್ಟರೆ ಸಾಕು, ನಮ್ಮ ಮನೆ, ಪರಿಸರ, ಓಣಿ, ಬಡಾವಣೆ, ಊರು ಸ್ವಚ್ಛವಾಗುತ್ತದೆ. ಇದರಿಂದ ಇಡೀ ನಾಡು ಸ್ವಚ್ಛವಾಗುವುದು ಎಂದರು.

ಯಾವಾಗ ನಾವು ಸ್ವಚ್ಛತೆ ಮರೆಯುತ್ತೇವೋ ಆಗ ಕೋವಿಡ್‌ನಂತಹ ಮಹಾಮಾರಿಗಳು ಕೈಬೀಸಿ ಕರೆಯುತ್ತವೆ ಎಂದು ಎಚ್ಚರಿಸಿದರು. ಅದಕ್ಕಾಗಿ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಗೊಳಪಡುವ ಬಡಾವಣೆ, ಓಣಿಗಳ ಸ್ವಚ್ಛತೆಯ ಬಗ್ಗೆ ನಿಗಾವಹಿಸಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಸಾಕು ಎಂದರು.

ಪ್ರತಿಯೊಂದು ಇಲಾಖೆಗಳು ತಮ್ಮ ಇಲಾಖೆಯ ವ್ಯಾಪ್ತಿಗೊಳಪಡುವ ಪ್ರದೇಶಗಳನ್ನು ಶುಚಿಯಾಗಿಡಲು ಕಾರ್ಯಕ್ರಮಗಳನ್ನು ರೂಪಿಸಬೇಕು. ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯನ್ನು ನಡೆಸಿ ಸ್ವಚ್ಛತಾ ಕಾರ್ಯಗಳ ಬಗ್ಗೆ ರೂಪರೇಷೆ ಸಿದ್ಧಪಡಿಸಬೇಕು. ಮನೆಯ ಹೊರಗೆ, ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ಮೇಲೆ ಪ್ರಕರಣ ದಾಖಲಿಸಿ, ದಂಡ ಹಾಕಬೇಕೆಂದರು.

ಸಭೆಯಲ್ಲಿ ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಗೌಳಿಕೆರೆಯ ಅತಿಕ್ರಮಣ ತಡೆಯಬೇಕು. ಕೆರೆಯ ಸ್ವಚ್ಛತಾ ಕಾರ್ಯವನ್ನು ಮಾಡಬೇಕೆಂದು ಸಲಹೆ ನೀಡಿದರು.

ಸುರೇಶ ಕೋಕಿತಕರ ಮಾತನಾಡಿ, ಶಾಸಕರ ಮಾದರಿ ಶಾಲೆಯ ಸ್ವಚ್ಛತೆಯ ಬಗ್ಗೆ ಪ್ರಸ್ತಾಪಿಸಿದರು. ಸಿರಾಜ ಮುನವಳ್ಳಿ, ಜಿ.ಡಿ. ಗಂಗಾಧರ ಮೊದಲಾದವರು ಸಲಹೆ ನೀಡಿದರು. ಗ್ರಾಮೀಣ ಭಾಗದ ನೈರ್ಮಲ್ಯದ ಸಮಸ್ಯೆಯನ್ನು ಶಿವಾನಂದ ಕಮ್ಮಾರ ಪ್ರಸ್ತಾಪಿಸಿದರು.

ಹಳಿಯಾಳ ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ದಾಂಡೇಲಿ ನಗರಸಭೆ ಅಧ್ಯಕ್ಷ ಅಶ್ಪಾಕ್ ಷೇಕ್, ಹಳಿಯಾಳ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ದಾಂಡೇಲಿ ತಹಸೀಲ್ದಾರ ಶೈಲೇಶ್ ಪರಮಾನಂದ, ಹಳಿಯಾಳ ಇಒ ವಿಲಾಸರಾಜ್, ದಾಂಡೇಲಿ ಇಒ ಟಿ.ಸಿ. ಹಾದಿಮನಿ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ