ಮೇದನಿ ಗ್ರಾಮದ 400 ಎಕರೆ ಒತ್ತುವರಿ ಭೂಮಿ ತೆರವು ಮಾಡಿ: ಸಂಸದ ಸುನಿಲ್‌ ಬೋಸ್‌

KannadaprabhaNewsNetwork |  
Published : Jul 15, 2025, 01:07 AM IST
61 | Kannada Prabha

ಸಾರಾಂಶ

ಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ. ಅವರೆಲ್ಲ ಮುಗ್ದರಿದ್ದಾರೆ. ಕೃಷಿಯೇ ಅವರಿಗೆ ಮೂಲ‌ಕಸುಬಾಗಿದೆ. ರೈತರ ಜಮೀನು, ಸರ್ಕಾರಿ ರಸ್ತೆ, ನಾಲೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ ಕೂಡಲೇ ಒತ್ತುವರಿಯಾದ ಜಮೀನನ್ನು ಸರ್ವೆ ಮಾಡಿ.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ತಾಲೂಕಿನ ತಲಕಾಡು ಹೋಬಳಿ ಮೇದನಿ ಗ್ರಾಮದಲ್ಲಿ ಸುಮಾರು 400 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ಉದ್ಯಮಿಯೊಬ್ಬರ ನಡೆಗೆ ತೀವ್ರ ಗರಂ ಆದ ಸಂಸದ ಸುನಿಲ್ ಬೋಸ್ ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವು ಮಾಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಘಟನೆ ತಾಲೂಕಿನ‌ಮೇದನಿ ಗ್ರಾಮದಲ್ಲಿ ನಡೆದಿದೆ.

ಪ್ರಭಾವಿ ಉದ್ಯಮಿಯೊಬ್ಬರು ರಸ್ತೆ ಮತ್ತು ಚಾನೆಲ್ ಮುಚ್ಚಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ವಿಷಯ ತಿಳಿದ ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ, ಎಸ್.ಪಿ. ವಿಷ್ಣುವರ್ಧನ್ ಹಾಗೂ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ತಾಲೂಕಿನ ಮೇದನಿ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಹ ಈ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಗರಂ ಆದ ಸಂಸದ ಸುನಿಲ್ ಬೋಸ್ ರಸ್ತೆ ಮತ್ತು ನಾಲೆ ಮುಚ್ಚಿ ಒತ್ತುವರಿ ಮಾಡಿಕೊಳ್ಳುವ ತನಕ ಅಧಿಕಾರಿಗಳು ಏನು ಮಾಡ್ತಾ ಇದ್ರಿ ಎಂದು ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ. ಅವರೆಲ್ಲ ಮುಗ್ದರಿದ್ದಾರೆ. ಕೃಷಿಯೇ ಅವರಿಗೆ ಮೂಲ‌ಕಸುಬಾಗಿದೆ. ರೈತರ ಜಮೀನು, ಸರ್ಕಾರಿ ರಸ್ತೆ, ನಾಲೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿ ವ್ಯಕ್ತಿ ಎಷ್ಟೇ ಪ್ರಭಾವಿಯಾದರೂ ಕೂಡಲೇ ಒತ್ತುವರಿಯಾದ ಜಮೀನನ್ನು ಸರ್ವೆ ಮಾಡಿ, ಒತ್ತುವರಿಯಾಗಿದ್ದು, ಕಂಡು ಬಂದರೆ ಕೂಡಲೇ ತೆರವುಗೊಳಿಸಿ ಮೂಲ ದಾಖಲಾತಿ ಇರುವವರಿಗೆ ಜಮೀನು ಸಿಗಲು ಅಗತ್ಯ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೂಡಲೇ ಸರ್ವೆ ಮಾಡಿಸಿ ಒತ್ತುವರಿ ತೆರವು ಮಾಡಿಸಿ:

ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಅವರೊಂದಿಗೆ ಮಾತನಾಡಿದ ಸಂಸದರು, ಡಿಸಿಯವರೇ ನೀವು ಜವಾಬ್ದಾರಿ ತೆಗೆದುಕೊಂಡು ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಕೆಲವರು ನಮ್ಮ ಜಮೀನು ಇದೆ ಎಂದು ಬರಬಹುದು. ಮೊದಲು ಸರ್ವೆ ಮಾಡಿಸಿ ಮೂಲ ದಾಖಲಾತಿ ಇದ್ದವರಿಗೆ ಯಾವುದೇ ತೊಂದರೆ ಕೊಡುವುದು ಬೇಡ. ಮೊದಲು ಉದ್ದೇಶಿತ ಜಮೀನಿನ ಸರ್ವೆ ಮಾಡಿಸಿ, ಆದಷ್ಟು ಶೀಘ್ರವಾಗಿ ಈ ಕೆಲಸ ಮಾಡಿ ಬಡ ಜನರಿಗೆ ಒಳ್ಳೆಯದನ್ನು ಮಾಡಿಕೊಡಿ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ಎರಡು ಸರ್ವೆ ನಂಬರ್ ಗಳಲ್ಲಿ 193 ಮತ್ತು 208 ಎಕರೆ ಒತ್ತುವರಿಯಾಗಿರುವ ಸರ್ಕಾರಿ ಜಮೀನು ಹಾಗೂ ರೈತರ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ದಬ್ಬಾಳಿಕೆಯಿಂದ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದ ಹಿನ್ನೆಲೆ ನಾಳೆಯಿಂದ 10 ದಿನಗಳ ವರೆಗೆ ಎರಡು ಸರ್ವೆ ನಂಬರ್ ಗಳ ಸರ್ವೆ ಕಾರ್ಯ ನಡೆಯಲಿದೆ ಎಂದರು.

ಡಿವೈಎಸ್ಪಿ ರಘು, ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು, ಸಾಮಾಜಿಕ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣೇಶ್, ಮಾಜಿ ಸದಸ್ಯ ನರಸಿಂಹ ಮಾದ ನಾಯಕ, ಪ್ರಸನ್ನ, ಉಪ್ಪಾರ ಮಹಾಸಭಾ ಅಧ್ಯಕ್ಷ ಮಹಾದೇವ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಾಂತರಾಜು, ತಲಕಾಡು ಎಂ.ಬಿ. ಸಾಗರ್, ಪುರಸಭೆ ಮಾಜಿ ಸದಸ್ಯ ರಾಘವೇಂದ್ರ, ಮೇದಿನಿಕುಮಾರ್, ಗ್ರಾಪಂ ಮಾಜಿ ಸದಸ್ಯ ರಾಜು ಇದ್ದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ