ಬ್ಯಾಡಗಿ: ಮಳೆಗಾಲದಲ್ಲಿ ರಾಜಕಾಲುವೆ ಬಹಳಷ್ಟು ಅವಶ್ಯವಿದ್ದು, ನೀರು ಸರಾಗವಾಗಿ ಹರಿದು ಹೋಗಲು ಇದನ್ನು ಬಿಟ್ಟು ಪರ್ಯಾಯ ಮಾರ್ಗವಿಲ್ಲ, ಹತ್ತು ಹಲವು ಸಮಸ್ಯೆಗಳಿಗೆ ಇದರಿಂದ ಮುಕ್ತಿ ಸಿಗಲಿದ್ದು, ಸಾರ್ವಜನಿಕರು ಖುದ್ದಾಗಿ ಒತ್ತುವರಿ ತೆರವುಗೊಳಿಸಿ ಸುಸೂತ್ರವಾಗಿ ಕಾಮಗಾರಿ ನಡೆಯಲು ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಬಸವರಾಜ ಶಿವಣ್ಣನವರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇಲ್ಲಿನ ಕನಕದಾಸ ಕಲಾಭವನದ ಬಳಿ ರು. 10 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ನಿಗಮದ ವತಿಯಿಂದ ರಾಜ ಕಾಲುವೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪ್ರತಿ ವರ್ಷವೂ ಮಳೆಗಾಲದಲ್ಲಿ ಸುಭಾಸ್ ಪ್ಲಾಟ್, ಇಸ್ಲಾಂಪೂರ ಗಲ್ಲಿ, ಶಿವಪುರ ಬಡಾವಣೆ, ವಿದ್ಯಾನಗರ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬಡ ಕುಟುಂಬಗಳ ಜನಜೀವನ ಅಸ್ತವ್ಯಸ್ತಗೊಂಡು ಅವಾಂತರ ಸೃಷಿಸುತ್ತಿತ್ತು. ಇದೀಗ ರಾಜಕಾಲುವೆ ದುರಸ್ತಿಗೆ ಮುಂದಾಗಿದ್ದು, ಇಂತಹ ನೂರೆಂಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿದೆ ಎಂದರು.ಪುರಸಭೆ ಅಂತಿಮವಲ್ಲ: ಪುರಸಭೆ ವತಿಯಿಂದ ಈ ಹಿಂದೆ ಕೆಲವರಿಗೆ ಅನಧಿಕೃತವಾಗಿ ಮನಸ್ಸಿಗೆ ಬಂದಂತೆ ಪಟ್ಟಾಗಳನ್ನು ವಿತರಿಸಿದ್ದಾರೆ. ಬಡವರಿಗೆ ಇದೊಂದು ಮಹಾಮೋಸವಾಗಿದೆ. ಇದನ್ನೇ ಸರಿ ಎಂದು ನಂಬಿರುವ ಕೆಲ ಜನರು ಹಲವು ಕಡೆಗಳಲ್ಲಿ ರಾಜಕಾಲುವೆ ಅರ್ಧದಷ್ಟು ಭಾಗ ಅತಿಕ್ರಮಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹಿಂದು ಮುಂದು ನೋಡದೇ ಒತ್ತುವರಿ ತೆರವುಗೊಳಿಸಬೇಕು ಮತ್ತು ಅಡ್ಡಿಪಡಿಸಿದವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಗುಣಮಟ್ಟದ ಕಾಮಗಾರಿ ನಡೆಸಿ:ರಾಜ ಕಾಲುವೆ ಒಟ್ಟು 6 ಮೀಟರ್ ಅಗಲ, ಎರಡೂ ಬದಿಗಳಲ್ಲಿ 2.ಮೀ. ಎತ್ತರಕ್ಕೆ ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಆದರೆ ಕೆಲವು ಕಾರಣದಿಂದ ಕಾಮಗಾರಿ ಅನುಷ್ಠಾನ ಆಗದೇ ಉಳಿದಿತ್ತು. ಸದರಿ ಕಾಮಗಾರಿಗೆ ಮರುಜೀವ ತಂದಿದ್ದು, ಸ್ಥಗಿತಗೊಂಡಿದ್ದ ಅನುದಾನ ಬಿಡುಗಡೆಗೊಳಿಸಿದ್ದೇನೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಿದೆ. ಗುತ್ತಿಗೆದಾರು ಯಾವುದೇ ಸಬೂಬು ಹೇಳದೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು. ಈ ವೇಳೆ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ, ಸದಸ್ಯರಾದ ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಫಕ್ಕೀರಮ್ಮ ಛಲವಾದಿ, ಕವಿತಾ ಸೊಪ್ಪಿನಮಠ, ಮಲ್ಲಮ್ಮ ಪಾಟೀಲ, ರಫೀಕ್ ಮುದುಗಲ್, ರಾಜೇಸಾಬ ಕಳ್ಯಾಳ, ದುರ್ಗೇಶ ಗೋಣೆಮ್ಮನವರ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾ ಏರೇಶಿಮಿ, ಸದಸ್ಯರಾದ ಮಜೀದ್ ಮುಲ್ಲಾ, ಗಿರೀಶ ಇಂಡಿಮಠ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಶ್ರೀನಿವಾಸ ಕುರಕುಂದಿ, ಖಾದರಸಾಬ್ ದೊಡ್ಮನಿ, ಶಿವಪುತ್ರ ಅಗಡಿ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರುದ್ರಪ್ಪ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಸೇರಿದಂತೆ ಹಲವರು ಭಾಗವಹಿಸಿದ್ದರು.