ಗರ್ಭಗುಡಿ ತೆರವುಗೊಳಿಸಿ ಅಂಬೇಡ್ಕರ್ ಪ್ರತಿಷ್ಠಾಪಿಸಿ: ಕರುನಾಡ ವಿಜಯಸೇನೆ

KannadaprabhaNewsNetwork | Published : Feb 4, 2024 1:38 AM

ಸಾರಾಂಶ

ಬಾಗೂರು ಗ್ರಾಮದಲ್ಲಿ ವೈಕುಂಠ ಏಕಾದಶಿಯಂದು ಚನ್ನಕೇಶವಸ್ವಾಮಿ ದೇವರ ದರ್ಶನಕ್ಕೆ ಹೋದಾಗ ಒಳಗೆ ಪ್ರವೇಶಿಸದಂತೆ ತಡೆಯೊಡ್ಡಿ ಅವಮಾನ ಮಾಡಿರುವ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಅರ್ಚಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರುನಾಡ ವಿಜಯಸೇನೆ ಆಗ್ರಹಿಸಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಇತರೆ ಹಿಂದುಳಿದ ಮಠಾಧಿಪತಿಗಳ ಹೊಸದುರ್ಗ ತಾಲೂಕಿನ ಬಾಗೂರು ಚೆನ್ನಕೇಶವಸ್ವಾಮಿ ದೇವಸ್ಥಾನದೊಳಗೆ ಬಿಟ್ಟುಕೊಳ್ಳದೇ ಇರುವ ಪ್ರಸಂಗಕ್ಕೆ ಕರುನಾಡ ವಿಜಯಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಶನಿವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹೊಸದುರ್ಗ ತಾಲೂಕಿನ ಸಾಣೆಹಳ್ಳಿಯಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು-ಚಿತ್ರದುರ್ಗ ಅಂತರಜಿಲ್ಲಾ ಸಾಹಿತ್ಯ ಸಮ್ಮೇಳನದ ಗೋಷ್ಢಿಯಲ್ಲಿ ಬಾಗೂರು ಚೆನ್ನಕೇಶವ ಸ್ವಾಮಿ ದೇವಸ್ಥಾನದೊಳಗೆ ಪ್ರವೇಶ ನೀಡದೇ ಇರುವ ತಮಗಾದ ನೋವಿನ ಪ್ರಸಂಗವನ್ನು ಹಂಚಿಕೊಂಡಿದ್ದಾರೆ. ಇದು ಅತ್ಯಂತ ಅಮಾನವೀಯ ಘಟನೆ ಯಾಗಿದ್ದು, ಸಂವಿಧಾನದ ಆಶಯಗಳ ಸ್ಪಷ್ಟ ಉಲ್ಲಂಘನೆ. ಮಠಾಧಿಪತಿಗಳಿಗೆ ಇಂತಹ ಪರಿಸ್ಥಿತಿ ಎದುರಾದರೆ ಉಳಿದವರ ಪಾಡೇನು? ಎಂದು ಪ್ರತಿಭಟನಾ ಕಾರರು ಪ್ರಶ್ನಿಸಿದರು.

ಬಾಗೂರು ಗ್ರಾಮದಲ್ಲಿ ವೈಕುಂಠ ಏಕಾದಶಿಯಂದು ಚನ್ನಕೇಶವಸ್ವಾಮಿ ದೇವರ ದರ್ಶನಕ್ಕೆ ಹೋದಾಗ ಒಳಗೆ ಪ್ರವೇಶಿಸದಂತೆ ತಡೆಯೊಡ್ಡಿ ಅವಮಾನ ಮಾಡಿರುವ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಅರ್ಚಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸ್ವಾಮೀಜಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಿರುವುದು ಶೋಷಿತ ಸಮುದಾಯಗಳಿಗೆ ಮಾಡಲಾದ ದೊಡ್ಡ ಅವಹಾನ. ಹಾಗಾಗಿ ಅಂಬೇಡ್ಕರ್ ಪ್ರತಿಮೆ ಕೈಲಿಡಿದು ಪಾದಯಾತ್ರೆ ಮೂಲಕ ಬಾಗೂರಿಗೆ ತೆರಳಲಾಗುವುದು. ದೇವಸ್ಥಾನದ ಒಳಗೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಕೋರಲಾಗುವುದು. ಜಿಲ್ಲೆಯ ಎಲ್ಲ ಶೋಷಿತ ಸಮುದಾಯಗಳ ಇಂತಹ ಕಾರ್ಯಕ್ಕೆ ಕೈ ಗೂಡಿಸುವುದು ಅಗತ್ಯವೆಂದು ಶಿವಕುಮಾರ್ ಮನವಿ ಮಾಡಿದರು.

ಕರುನಾಡ ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ರಾಜಣ್ಣ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಖಿಲೇಶ್, ಪ್ರದೀಪ್ ಈ ಸಂದರ್ಭದಲ್ಲಿ ಹಾಜರಿದ್ದರು.

ಗುಡಿಯಲ್ಲೇ ಶಾಲೆ ತೆರೆಯಲು ಒತ್ತಾಯ

ಸ್ವಾಮೀಜಿ ಹೊರಬಂದ ನಂತರ ದೇವಸ್ಥಾನವನ್ನು ನೀರಿನಿಂದ ತೊಳೆದಿರುವುದನ್ನು ಸ್ವತಃ ಕಣ್ಣಾರೆ ಕಂಡ ಈಶ್ವರಾನಂದಪುರಿ ಸ್ವಾಮೀಜಿ ನೊಂದು ನುಡಿದಿರು ವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಸ್ಪೃಶ್ಯತೆ ಇನ್ನೂ ಜಿಲ್ಲೆಯಲ್ಲಿ ಜೀವಂತವಾಗಿದೆ ಎನ್ನುವುದು ಇದರಿಂದ ಗೊತ್ತಾಗುತ್ತಿದೆ. ದೇವಸ್ಥಾನದ ಗರ್ಭಗುಡಿಯಲ್ಲಿರುವ ಚೆನ್ನಕೇಶವ ಮೂರ್ತಿ ತೆರವುಗೊಳಿಸಿ ಆ ಜಾಗದಲ್ಲೇ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಪ್ರತಿಮೆಯಿಟ್ಟು, ಅಂಗನವಾಡಿ ಇಲ್ಲವೇ ಶಾಲೆಯನ್ನು ತೆರೆಯುವಂತೆ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

.

Share this article