- ಅಕೇಶಿಯಾ ಮರ ಬಿದ್ದು ವ್ಯಕ್ತಿ ಮರಣ ಹೊಂದಿದ ಸ್ಥಳಕ್ಕೆ ಶಾಸಕ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹೆದ್ದಾರಿ ಬದಿಯಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸುವುದು ಅಗತ್ಯ. ಮಾರ್ಗದ ಬದಿಯಲ್ಲಿ ಬೆಳೆದು ನಿಂತಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸದ ಅರಣ್ಯ ಇಲಾಖೆಯವರ ಬೇಜವಾಬ್ದಾರಿಯೇ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಗಾಳಿಮಳೆಯಿಂದಾಗಿ ಕೋಣಂದೂರು ಸಮೀಪ ದೇಮ್ಲಾಪುರದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜಯಂತ ಭಟ್ ಎಂಬುವವರ ಮೈಮೇಲೆ ಮರ ಉರುಳಿ ಬಿದ್ದು ಮೃತರಾದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರಿ ಅಧಿಕಾರಿಗಳು ವಾಸ್ತವ ಚಿತ್ರಣವನ್ನು ಅರಿಯದೇ ಕಾನೂನು ರಕ್ಷಣೆ ನೆಪದಲ್ಲಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬಾರದು. ಕಾನೂನು ರಚನೆಯಾಗಿರುವುದೇ ಸಾರ್ವಜನಿಕರ ರಕ್ಷಣೆಗೆ ಎಂಬ ಕಲ್ಪನೆ ಅಧಿಕಾರಿಗಳಿಗೆ ಇರಬೇಕು ಎಂದೂ ಖಾರವಾಗಿ ಪ್ರತಿಕ್ರಿಯಿಸಿದರು.ಕೆಡಿಪಿ ಮತ್ತು ತಾಲೂಕು ಪಂಚಾಯ್ತಿಯ ಪ್ರತಿ ಸಭೆಗಳಲ್ಲಿ ಅರಣ್ಯಾಧಿಕಾರಿಗಳಿಗೆ ರಸ್ತೆ ಬದಿ ಇರುವ ಮತ್ತು ವಿದ್ಯುತ್ ಮಾರ್ಗದ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಸೂಚಿಸುತ್ತೇವೆ. ಈ ಬಗ್ಗೆ ಕ್ಯಾರೇ ಎನ್ನದ ಅಧಿಕಾರಿಗಳು ಇಂತಹ ದುರಂತಗಳಿಗೆ ಕಾರಣವಾಗುತ್ತಾರೆ. ಇಂತವರ ವಿರುದ್ಧ ಯಾಕೆ ಕ್ರಿಮಿ ನಲ್ ಮೊಕದ್ದಮೆ ದಾಖಲಿಸಬಾರದು ಎಂದೂ ಪ್ರಶ್ನಿಸಿ, ಪ್ರಕೃತಿ ರಕ್ಷಣೆಯ ವಿಚಾರದಲ್ಲಿ ನಮಗೂ ಕಾಳಜಿ ಇದೆ. ಆದರೆ ಅಕೇಶಿಯಾದಿಂದಾಗಿ ಈ ಭಾಗದಲ್ಲಿ ಮಳೆಗಾಲದಲ್ಲಿ ಸಂಭವಿಸುವ ಹಲವಾರು ಸಮಸ್ಯೆಗಳಿಗೆ ಮಾನವ ನಿರ್ಮಿತವಾದ ಕಾಡು ಅಕೇಶಿಯಾ ಕಾರಣವಾಗುತ್ತಿದೆ ಎಂಬುದೂ ಅಷ್ಟೇ ಸತ್ಯ ಎಂದರು.ವಿದ್ಯುತ್ ಮಾರ್ಗದ ಮೇಲೆ ಅಕೇಶಿಯಾ ಮರಗಳು ಉರುಳಿ ಬೀಳುತ್ತಿರುವುದರಿಂದಾಗಿ ಪ್ರತಿ ವರ್ಷ ನೂರಾರು ಕಂಬಗಳು ನೆಲಕ್ಕುರುಳುವುದಲ್ಲದೇ ಟ್ರಾನ್ಸ್‍ಫರ್ಮರ್‍ಗಳು ಸುಟ್ಟು ಲಕ್ಞಾಂತರ ರೂ ನಷ್ಟ ಸಂಭವಿಸುತ್ತದೆ. ಗ್ರಾಮೀಣ ಪ್ರದೇಶದ ಜನರು ವಾರಗಟ್ಟಲೆ ಕತ್ತಲೆಯಲ್ಲಿ ದಿನ ಕಳೆಯಬೇಕಾಗುತ್ತದೆ. ಹೀಗಾಗಿ ಮಳೆಗಾಲ ಆರಂಭಕ್ಕೆ ಮುನ್ನ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಅಕೇಶಿಯಾ ಮರಗಳನ್ನು ಕಡಿತಲೆ ಮಾಡಬೇಕು ಎಂದು ಹೇಳಿದರು.