ಕನ್ನಡಪ್ರಭ ವಾರ್ತೆ ಬೀದರ್
ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ತಾಪಮಾನದ ಏರಿಕೆ, ಮಳೆ ಪ್ರಮಾಣದಲ್ಲಿ ಇಳಿಕೆ, ಅಕಾಲಿಕ ಮಳೆ, ಮತ್ತು ಋತುಗಳಲ್ಲಿ ಬದಲಾವಣೆ ಆಗುತ್ತಿದ್ದು ಜಿಲ್ಲೆಯಲ್ಲೂ ಅದರ ಪರಿಣಾಮ ಅನುಭವಕ್ಕೆ ಬರುತ್ತಿದೆ ಎಂದು ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ.ಕೆ.ಸಿ.ವೀರಣ್ಣ ನುಡಿದರು.ನಗರದ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆ ನೌಬಾದ್‌ನಲ್ಲಿ ನಬಾರ್ಡ್ ವತಿಯಿಂದ ಆಯೋಜಿಸಿರುವ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ವಾರ್ಷಿಕ ಸರಾಸರಿ 1200 ಮಿ.ಮೀ. ಮಳೆಯಾಗುತ್ತಿದ್ದ ಪ್ರದೇಶದಲ್ಲಿ ಈಗ ಕೇವಲ 700ರಿಂದ 800 ಮಿ.ಮೀ. ಮಳೆಯಾಗುತ್ತಿದೆ. ಸುತ್ತಲ 4 ಕಿ.ಮೀ. ದೂರದಲ್ಲಿ ಮಳೆ ಪ್ರಮಾಣದ ಏರಿಳಿತ ಕಂಡುಬರುತ್ತಿದೆ. ಇದರಿಂದ ಹವಾಮಾನ ಆಧಾರಿತ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮಗಳಾಗುತ್ತಿವೆ ಎಂದರು.
ಬೆಳೆಗಳಿಗೆ ಕೀಟಗಳ ಹಾವಳಿ, ರೋಗಗಳ ತೀವ್ರತೆ ಮತ್ತು ಕೃಷಿ ಇಳುವರಿ ನಷ್ಟ, ಜಾನುವಾರು ಮೇವಿನ ಸಮಸ್ಯೆಗಳು ರೈತನನ್ನು ಕಾಡುತ್ತಿವೆ. ಹಸುಗಳಿಗೆ ಬೇಕಾಗುವ ಸಾಮಾನ್ಯ ತಾಪಮಾನಕ್ಕಿಂತ 0.2 ಸೆಲ್ಸಿಯಸ್ ಉಷ್ಣತೆ ಹೆಚ್ಚಾದರೂ ಹಸುಗಳ ಹಾಲಿನ ಇಳುವರಿಯಲ್ಲಿ 1ರಿಂದ 2 ಲೀಟರ್‌ಗಳಷ್ಟು ಕಮ್ಮಿಯಾಗುವುದು ಸಂಶೋಧನೆಯಿಂದ ಧೃಡಪಟ್ಟಿದೆ. ಅದಕ್ಕಾಗಿ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮಳೆಗೆ ನೆನೆಯಲ್ಲ, ಬಿಸಿಲಿಗೆ ಒಣಗಲ್ಲ ಎಂಬ ಮಾದರಿ ದನದ ಕೊಟ್ಟಿಗೆಯನ್ನು ನಿರ್ಮಿಸಿ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಬೆಳೆ ಹೆಚ್ಚಿದ್ದು, ಅದರಲ್ಲಿ ಪ್ರೋಟಿನ್ ಅಂಶಗಳು ಹೇರಳವಾಗಿದ್ದು, ಅದಕ್ಕಾಗಿ ಉತ್ಕೃಷ್ಟ ಎಮ್ಮೆ ಹಾಲು ದೊರಕುತ್ತದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಿದ್ದು, ಅದಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಬೆಳೆಸಲಾಗುತ್ತದೆ. ಹೈನುಗಾರಿಕೆ ಮತ್ತು ಕೃಷಿ ಒಟ್ಟಿಗೆ ಸಾಗಿದಾಗ ರೈತರು ಆರ್ಥಿಕವಾಗಿ ಲಾಭಗಳಿಸಲು ಸಾಧ್ಯವಿದೆ. ಅದಕ್ಕಾಗಿ ಸಂಘ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಬೇಕೆಂದರು.
ತೋಟಗಾರಿಕೆ ಕಾಲೇಜಿನ ಡೀನ್ ಎಸ್.ವಿ ಪಾಟೀಲ ಮಾತನಾಡಿ, ದೇಶವನ್ನು 20 ಪ್ರಾದೇಶಿಕ ಬೆಳೆಗಳ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ 10 ವಲಯಗಳು ಕರ್ನಾಟಕ ರಾಜ್ಯದಲ್ಲಿವೆ. ಇದರಿಂದ ಪ್ರಾದೇಶಿಕ ಹವಾಗುಣಕ್ಕೆ ಅನುಗುಣವಾದ ಬೆಳೆ ಬೆಳೆದರೆ ರೈತರು ನಷ್ಟ ರಹಿತವಾಗಿ ಕೃಷಿ ನಡೆಸಬಹುದು ಎಂದರು.ಸಸಿ ನೆಡುವುದಕ್ಕಿಂತಲೂ ಅದನ್ನು ಪೋಷಿಸುವುದು ಅತಿ ಮುಖ್ಯವಾಗಿದೆ. ಪರಿಸರ ಉಳಿಸುವ ಕಾರ್ಯಕ್ರಮಗಳು ಅಲ್ಪಕಾಲೀನ ಲಾಭದಾಸೆಯ ಕಾರ್ಯಕ್ರಮವಾಗಿರದೆ ಮುಂದಿನ ಪೀಳಿಗೆಗಾಗಿ ನಡೆಯುವ ಕಾರ್ಯಕ್ರಮ ಆದಾಗ ಅರ್ಥಪೂರ್ಣವಾಗುತ್ತವೆ. ಶುಷ್ಕ ವಾತಾವರಣ ಬಯಸುವ ಕುಸುಬಿ ಬೆಳೆಯನ್ನು ಕೇವಲ ಬೀದರ್, ಗುಲಬರ್ಗಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ನಾವು ಅದನ್ನು ಬಿಟ್ಟು ಕಬ್ಬು ಬೆಳೆದು ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.
ನಬಾರ್ಡ ಜಿಲ್ಲಾ ಅಭಿವೃದ್ದಿ ಅಧಿಕಾರಿ ರಾಮರಾವ್ ವೈ ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಪಶುವೈದ್ಯಕೀಯ ಕಾಲೇಜಿನ ಅಂಬಾದಾಸ, ಕೆವಿಕೆ ವಿಜ್ಞಾನಿ ಮಲ್ಲಿಕಾರ್ಜುನ ನಿಂಗದಳ್ಳಿ, ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುಜೀಬ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.ಎಫ್ಪಿಎಐ ಸಂಘದ ಶ್ರೀನಿವಾಸ ಬಿರಾದಾರ ಪರಿಸರ ಕಾರ್ಯಕರ್ತ ಶೈಲೇಂದ್ರ ಕಾವಡಿ ವಿವಿಧ ಸಂಘಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ಭಾಗವತ ನಿರೂಪಿಸಿದರು.