ರಾಮಕೃಷ್ಣ ದಾಸರಿ
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಪತ್ರ ಬರೆದಿರುವುದು, ಜಿಲ್ಲೆಯ ಜನರ ಏಮ್ಸ್ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ರಾಜ್ಯದಲ್ಲಿ ಏಮ್ಸ್ ಸ್ಥಾಪಿಸುವ ಪ್ರಸ್ತಾವ ನೆನೆಗುದಿಗೆ ಬಿದ್ದಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಗೆ ಬರುವ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಗೆ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯ ಆರೋಗ್ಯ, ಶಿಕ್ಷಣ ಮತ್ತು ತಲಾ ಆದಾಯ ಮಟ್ಟದಲ್ಲಿ ತೀರಾ ಹಿಂದುಳಿದಿದೆ. ಇಂತಹ ಸ್ಥಳದಲ್ಲಿ ಉನ್ನತ ಮಟ್ಟದ ಸಂಸ್ಥೆಯ ಸ್ಥಾಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಫೆ.2ರಂದು ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ನೀಡಲು ಕ್ರಮವಹಿಸಬೇಕು ಎಂದು ಸಿಎಂ ಪತ್ರದಲ್ಲಿ ಮನವಿ ಮಾಡಿದ್ದಾರೆ.ಮುಖ್ಯಮಂತ್ರಿಯವರು ಬರೆದಿರುವ ಪತ್ರದಲ್ಲಿ ರಾಯಚೂರು ಏಮ್ಸ್ ಸ್ಥಾಪನೆಗೆ ರಾಯಚೂರು ಆತ್ಯಂತ ಸೂಕ್ತ ಸ್ಥಳ ಎಂದು ಹೇಳಿರುವುದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರಿಗೆ ಆನೆ ಬಲ ತಂದು ಕೊಟ್ಟಿದೆ.ಕಳೆದ 628 ದಿನಗಳಿಂದ ಹೋರಾಟ
ಈಗ ಮತ್ತೆ ಸಿಎಂ ಸಿದ್ದರಾಮಯ್ಯ ಜಿಲ್ಲೆ ಮೇಲೆ ಮುತುವರ್ಜಿ ವಹಿಸಿ ವಿತ್ತ ಸಚಿವ ನಿರ್ಮಲಾ ಸೀತರಾಮನ್‌ಗೆ ಸೋಮವಾರ ಬರೆದ ಮನವಿಯಲ್ಲಿ ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಕೋರಿದ್ದಾರೆ. ಕೇಂದ್ರ ಸರ್ಕಾರದ ಈ ಅವಧಿಯ ಕೊನೆ ಬಜೆಟ್‌ನಲ್ಲಿ ಆದರು ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಏಮ್ಸ್ ದೊರೆಯಲಿದೆಯೆ ಕಾದು ನೋಡಬೇಕಾಗಿದೆ.