ಮಾರ್ಚ್‌ 5,6ರಂದು ಕದಂಬೋತ್ಸವ, ಉದ್ಘಾಟನೆಗೆ ಸಿಎಂ ಆಗಮನ

KannadaprabhaNewsNetwork | Published : Mar 1, 2024 2:21 AM

ಸಾರಾಂಶ

ಬನವಾಸಿ ಕದಂಬೋತ್ಸವ ಮಾ. ೫, ೬ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಮಂಗಳವಾರ ಸಂಜೆ ೬ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಿರಸಿ:

ಬನವಾಸಿ ಕದಂಬೋತ್ಸವ ಮಾ. ೫, ೬ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಮಂಗಳವಾರ ಸಂಜೆ ೬ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನಗರದ ಮಿನಿ ವಿಧಾನ ಸೌಧದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ಉತ್ಸವದ ಸಿದ್ಧತೆ ನಡೆದಿದೆ. ₹ 2 ಕೋಟಿ ಸರ್ಕಾರದಿಂದ ಬಿಡುಗಡೆ ಆಗಿದ್ದು ಸಂಭ್ರಮದಲ್ಲಿ ಉತ್ಸವ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಜ್ಜಾಗಿದೆ ಎಂದರು.ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿಭೆಗಳ ಜತೆಗೆ ಮೊದಲ ದಿನ ರಘು ದೀಕ್ಷಿತ್ ತಂಡ ಹಾಗೂ ಎರಡನೇ ದಿನ ಹರಿಕೃಷ್ಣ ತಂಡ ಕಾರ್ಯಕ್ರಮ ನೀಡಲಿದೆ. ಬನವಾಸಿ ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣೇ ಭೈರೇಗೌಡ, ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ವಿಪಕ್ಷ ನಾಯಕ ಆರ್. ಅಶೋಕ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಮತ್ತಿತರರು ಭಾಗವಹಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತ ನಾ. ಡಿಸೋಜ ಭಾಗವಹಿಸಿದ್ದಾರೆ. ಮಾ. ೫ರ ಮಧ್ಯಾಹ್ನ ೨ಕ್ಕೆ ಮಧುಕೇಶ್ವರ ದೇವಸ್ಥಾನದ ಎದುರಿನಿಂದ ಕದಂಬ ಸಾಂಸ್ಕೃತಿಕ ಕಲಾ ಮೆರಣಿಗೆ ನಡೆಯಲಿದೆ. ಸಮಾರೋಪ ಸಮಾರಂಭ ಮಾ. ೬ರ ಸಂಜೆ ೬ಕ್ಕೆ ಬನವಾಸಿಯಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಜಮೀರುಲ್ಲ ಷರೀಫ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಾಂಸ್ಕೃತಿಕ ಸಂಭ್ರಮ:ಉತ್ಸವದ ಮೊದಲ ದಿನ ಸುಜಾತಾ ಧಾರವಾಡ ಭಕ್ತಿಸಂಗೀತ, ಶಹನಾಯಿ ಡಾ. ಕೃಷ್ಣ ಬಾಲ್ಲೇಶ, ವಚನ ಸಂಗೀತ ರೋಹಿಣಿ ಹಿರೇಮಠ, ಸುಗಮ ಸಂಗೀತ ಶಿರಸಿ ರತ್ನಾಕರ, ಭರತನಾಟ್ಯ ಡಾ. ಚೇತನಾ ರಾಧಾಕೃಷ್ಣನ್, ಶ್ರೇಯಾ ಪಾಟೀಲ, ಗಿಚ್ಚಿ ಗಿಲಿಗಿಲಿ ತಂಡ ಕಾಮಿಡಿ ಶೋ, ಕೃತ್ತಿಕಾ ದಯಾನಂದ ನೃತ್ಯ ವೈಭವ, ರವಿ ತಂಡದಿಂದ ಆಕ್ಸಿಜನ್ ಡಾನ್ಸ್ ನಡೆಯಲಿದೆ. ಬಳಿಕ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ೬ರ ಬೆಳಗ್ಗೆ ೧೦.೩೦ರಿಂದ ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ ೨.೩೦ಕ್ಕೆ ಇತಿಹಾಸ ಗೋಷ್ಠಿ ನಡೆಯಲಿದ್ದು ಕೆ.ಎನ್. ಹೊಸ್ಮನಿ ಅಧ್ಯಕ್ಷತೆ ವಹಿಸುವರು. ಮೋಹನ ಭರಣಿ ವಿಷಯ ಮಂಡಿಸಲಿದ್ದಾರೆ ಎಂದು ಅಪರ್ಣಾ ಮಾಹಿತಿ ನೀಡಿದರು.ಸಂಜೆ ೫ ರಿಂದ ವಿವಿಧ ಕಲಾವಿದರಿಂದ ನೃತ್ಯ ರೂಪಕ, ಸಂಗೀತ, ಯಕ್ಷಗಾನ, ಒಡಿಸ್ಸಿ ನೃತ್ಯ, ಭರತನಾಟ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಹರಿಕೃಷ್ಣ ತಂಡದಿಂದ ಸಂಗೀತ ಸಂಭ್ರಮ ನಡೆಯಲಿದೆ. ಕದಂಬೋತ್ಸವ ಹಿನ್ನೆಲೆಯಲ್ಲಿ ಕದಂಬ ಜ್ಯೋತಿ ಉದ್ಘಾಟನೆ ಮಾ. ೩ರಂದು ಗುಡ್ನಾಪುರದಲ್ಲಿ ಬೆಳಗ್ಗೆ ೧೧ಕ್ಕೆ ನಡೆಯಲಿದೆ. ಬನವಾಸಿಯ ಕದಂಬೋತ್ಸವ ಮೈದಾನದಲ್ಲಿ ಅದೇ ದಿನ ಮಧ್ಯಾಹ್ನ ೩ರಿಂದ ವಿವಿಧ ಕ್ರೀಡಾಸ್ಪರ್ಧೆಗಳು ಜರುಗಲಿದೆ ಎಂದರು.ಈ ವೇಳೆ ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್‌ ಶ್ರೀಕೃಷ್ಣ ಕಾಮಕರ, ಗ್ರೇಡ್-೨ ತಹಸೀಲ್ದಾರ್‌ ರಮೇಶ ಹೆಗಡೆ, ತಾಪಂ ಇಒ ಸತೀಶ ಹೆಗಡೆ, ಬಿಇಒ ನಾಗರಾಜ ನಾಯ್ಕ ಇದ್ದರು.

ಮತ್ತೊಮ್ಮೆ ಪ್ರಶಸ್ತಿ ಪ್ರದಾನ?:ಪ್ರತಿ ವರ್ಷ ಕದಂಬೋತ್ಸವದ ವೇದಿಕೆಯಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಬೆಂಗಳೂರಿನಲ್ಲಿ ನಾ. ಡಿಸೋಜಾ ಅವರಿಗೆ ಪ್ರದಾನ ಮಾಡಲಾಗಿದೆ. ಆದರೆ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ಎರಡು ಬಾರಿ ಪಂಪ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ.

ಶಾಸಕ ಹೆಬ್ಬಾರ್ ಗೈರು:ಪ್ರತಿ ಕದಂಬೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಿಂದ ಎಲ್ಲ ಹಂತದಲ್ಲೂ ಸಕ್ರಿಯವಾಗಿ ಇರುತ್ತಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಬಾರಿ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ ಗೈರಾದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಕದಂಬೋತ್ಸವ ಕೂಡ ನಡೆಯುತ್ತಿದ್ದು, ಹೆಬ್ಬಾರ್ ಅವರ ಗೈರು ಅನೇಕ ಅನುಮಾನಗಳಿಗೆ ಕಾರಣವಾಗುತ್ತಿದೆ.

Share this article