ಹುಬ್ಬಳ್ಳಿ: ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಆರ್.ವಿ. ದೇಶಪಾಂಡೆ ತಮ್ಮ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟು ತಪ್ಪು ಮಾಡಿದೆ ಎಂಬ ಅರಿವು ರಾಜ್ಯಪಾಲರಿಗೆ ಆಗಿರಬಹುದು ಎಂದು ನಮಗೆ ಅನಿಸುತ್ತಿದೆ ಎಂದರು.
ರಾಜ್ಯಪಾಲರಿಗೆ ಅರಿವು: ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದಕ್ಕೆ ರಾಜ್ಯಪಾಲರಿಗೆ ತಪ್ಪು ಮಾಡಿದೆ ಎಂಬ ಅರಿವು ಆಗಿದೆ ಎಂದೆನಿಸುತ್ತದೆ. ಏಕೆಂದರೆ ಶಾಸಕರೆಲ್ಲರೂ ಹೋದಾಗ ನಾನು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ ಎಂದು ಹೇಳಿದ್ದರು. ಈ ಮಾತನ್ನು ಕೇಳಿದರೆ ಬಿಜೆಪಿ ಒತ್ತಡಕ್ಕೆ ಮಣಿದು ಈ ಕ್ರಮಕ್ಕೆ ಮುಂದಾಗಿರುವುದು ಗೊತ್ತಾಗುತ್ತದೆ. ಪ್ರಾಸಿಕ್ಯೂಷನ್‌ಗೆ ಕೊಟ್ಟ ಮೇಲೆ ಅವರಿಗೆ ಮುಜುಗರವಾಗುತ್ತಿದೆ. ಬಿಜೆಪಿ ಒತ್ತಡಕ್ಕೆ ಮಣಿದು ಕೊಟ್ಟಿದ್ದೇನೆ ಎಂಬಂತೆ ಅವರು ಮಾತನಾಡಿದರು. ಹೀಗಾಗಿ ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆಯೋ ಇಲ್ಲವೋ ನೀವೇ ಹೇಳಿ ಎಂದರು.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನಿಲ್ಲ. ಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ. ಸಿದ್ದರಾಮಯ್ಯ ಅವರಿಗೆ ಏನು ಸಮಸ್ಯೆಯಾಗಲ್ಲ ಎಂದರು. ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಜತೆಗೆ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದರು.ಚನ್ನಪಟ್ಟಣದಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಅವರು, ಉಪಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಟಿಕೆಟ್ ಯಾರಿಗೆ ಕೊಡಬೇಕೆನ್ನುವುದು ಹೈಕಮಾಂಡ್ ನಿರ್ಧರಿಸಲಿದೆ. ಶಿಗ್ಗಾಂವಿ- ಸವಣೂರು ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಕೊಡಿ ಎಂದು ಕೇಳಿದ್ದೇವೆ. ಆದರೆ ಹೈಕಮಾಂಡ್ ಏನು ಮಾಡುತ್ತದೆಯೋ ನೋಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎಂದರು.