ಸಿಎಂ ಬದಲಾವಣೆ ಚರ್ಚೆ ನಮ್ಮ ಪಕ್ಷದಲ್ಲಿಲ್ಲ: ಸಚಿವ ತಂಗಡಗಿ

KannadaprabhaNewsNetwork |  
Published : Sep 17, 2024, 12:50 AM IST
೧೬ಕೆಎನ್‌ಕೆ-೨                                                                                               ಸಚಿವ ತಂಗಡಗಿ.  | Kannada Prabha

ಸಾರಾಂಶ

ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ, ವಿನಃ ನಮ್ಮ ಪಕ್ಷದಲ್ಲಿ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಬೊಮ್ಮಸಾಗರ ತಾಂಡಾದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನಮ್ಮ ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ವ್ಯಕ್ತಪಡಿಸಿರುವುದು ತಪ್ಪಲ್ಲ. ರಾಜಕಾರಣಿಗಳಿಗೆ ಆಸೆ ಸಹಜವಾಗಿ ಇದ್ದದ್ದೆ. ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಬದಲಾವಣೆ ವಿಚಾರ ರಾಜಕೀಯ ಪ್ರೇರಿತ ಎಂದರು.

ನಾನು ಅಮೆರಿಕಾ ಪ್ರವಾಸ ಕೈಗೊಂಡಿದ್ದರಿಂದ ಕನಕಗಿರಿ ಪಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವಿಳಂಬವಾಗಿದೆ. ಕೂಡಲೇ ಚುನಾವಣೆ ಪ್ರಕ್ರಿಯೆ ನಡೆಸಲಿದ್ದು, ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗಲಿದ್ದಾರೆ. ಈ ಸ್ಥಾನಗಳಿಗೆ ಮೀಸಲಿರುವ ಅಭ್ಯರ್ಥಿಗಳು ಕಾಂಗ್ರೆಸ್‌ನಲ್ಲಿಯೇ ಇದ್ದುದರಿಂದ ಕನಕಗಿರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಕನಕಗಿರಿಯಲ್ಲಿ ₹ ೫೦ ಲಕ್ಷ ವೆಚ್ಚದಲ್ಲಿ ಭಾರತೀಯ ಸೇನಾ ತರಬೇತಿ ಕೇಂದ್ರ ಆರಂಭಿಸಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನೂ ಉಪ ನೋಂದಣಿ ಕಚೇರಿಯನ್ನು ತೆರೆಯಲು ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಇವರೆಡು ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಪಿಡಿಒಗೆ ಸಚಿವ ತಂಗಡಗಿ ತರಾಟೆ:

ಪಂಚಾಯಿತಿ ಕೆಲಸ ನಾನೇ ಮಾಡಬೇಕಾ? ನೀ ಏನ್ ಕತ್ತೆ ಕಾಯ್ತಿಯಾ ಎಂದು ಸಚಿವ ಶಿವರಾಜ ತಂಗಡಗಿ ಪಿಡಿಒ ನಾಗೇಶ ಪೂಜಾರಗೆ ತೀವ್ರ ತರಾಟೆಗೆ ತೆಗೆದುಕೊಂಡರು.ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದ ಭೋವಿ ಕಾಲನಿಯಲ್ಲಿ ಸೋಮವಾರ ಸಿಸಿ ರಸ್ತೆ ಭೂಮಿ ಪೂಜೆಗೆ ಬಂದಿದ್ದ ಸಚಿವರಿಗೆ ನಿವಾಸಿಗಳು ವಿದ್ಯುತ್ ಮೀಟರ್ ಹಾಗೂ ಕಂಬ ಅಳವಡಿಸಿಲ್ಲ. ಪಿಡಿಒ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸತಾಯಿಸುತ್ತಿದ್ದು, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿದ್ದಂತೆ ಸಚಿವ ತಂಗಡಗಿ ಕೆಂಡಾಮಂಡಲರಾದರು.ಪಂಚಾಯಿತಿ ಕೆಲಸವೂ ನಾನೇ ಮಾಡಬೇಕಾಗಿದೆ. ಪಿಡಿಒ ನೀನ್ ಕತ್ತೆ ಕಾಯ್ತಾ ಇದೀಯಾ? ವಾರದಲ್ಲಿ ನಿವಾಸಿಗಳಿಗೆ ಮೀಟರ್ ಕನೆಕ್ಷನ್ ಕೊಡಿಸಿ ಕಂಬ ಹಾಕಿಸಬೇಕು. ಇಲ್ಲವಾದರೆ ಅಮಾನತು ಮಾಡುವುದಾಗಿ ಸಚಿವರು ಪಿಡಿಒಗೆ ಖಡಕ್ ಸೂಚನೆ ನೀಡಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು